ಭಟ್ಕಳ : ಮಾರ್ಚ ೮ರಂದು ಮುರುಡೇಶ್ವರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ನಡೆಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಇಂದು(ಫೆ.೨೯) ಸಂಜೆ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.
ಇದನ್ನೂ ಓದಿ : ಶ್ರೀ ಕ್ಷೇತ್ರ ಮುರ್ಡೇಶ್ವರದಲ್ಲಿ ಮಹಾ ಶಿವರಾತ್ರಿ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಮಹಾಶಿವರಾತ್ರಿ ನಿಮಿತ್ತ ರಾಜ್ಯಮಟ್ಟದ ಕಲಾವಿದರಿಂದ ಭಜನೆ, ನೃತ್ಯ, ಭರತ ನಾಟ್ಯ ಸೇರಿದಂತೆ ಗುಣಮಟ್ಟದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ೬ ಗಂಟೆಯಿಂದ ಬೆಳಿಗ್ಗೆವರೆಗೆ .ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಬೇಕಾಗಿದೆ. ಇದಕ್ಕೆ ಅಗತ್ಯ ಮುಂಜಾಗ್ರತಾ ಸಿದ್ಧತೆಗಳನ್ನು ಮಾಡಬೇಕಾಗಿದೆ. ಕಾರ್ಯಕ್ರಮವನ್ನು ಸಂಪೂರ್ಣ ಪ್ರಾಯೋಜಕರು ಹಾಗೂ ದಾನಿಗಳ ಸಹಾಯದಿಂದ ಮಾಡಲು ತೀರ್ಮಾನಿಸಲಾಗಿದೆ. ಅತ್ಯುತ್ತಮವಾಗಿ ಆಯೋಜನೆ ಮಾಡಿ ಜನರಿಂದ ಪ್ರತಿ ವರ್ಷ ಇಂತಹ ಕಾರ್ಯಕ್ರಮ ನಡೆಯಲಿ ಎನ್ನುವ ಮಟ್ಟಿಗೆ ಸಾರ್ವಜನಿಕರಿಂದ ಪ್ರಶಂಸೆ ಬರುವಂತಾಗಬೇಕು. ಜಿಲ್ಲೆಯಾದ್ಯಂತ ಈ ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ಮಾಡುವಂತೆ ಪ್ರವಾಸೋದ್ಯಮ ಅಧಿಕಾರಿಗೆ ತಿಳಿಸಿದರು.
ಆಯಾ ಇಲಾಖೆಯ ಅಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಯನ್ನು ಚಾಚೂ ತಪ್ಪದೇ ನಿಭಾಯಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕಾರ ನೀಡಬೇಕಿದೆ. ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ಪ್ರವಾಸಿಗರು, ಸ್ಥಳೀಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಮಾಡಬೇಕು. ಪ್ರವಾಸೋದ್ಯಮ ಇಲಾಖೆಯು ಸ್ಥಳೀಯ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸಿದ್ಧತಾ ಕಾರ್ಯ ಆರಂಭಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪದೋಷ ಉಂಟಾಗದಂತೆ ಗಮನ ಹರಿಸಬೇಕು. ಕುಡಿಯುವ ನೀರು, ಸ್ವಚ್ಛತೆ, ಭದ್ರತೆ ಸಮರ್ಪಕವಾಗಬೇಕು ಎಂದರು.
ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಅಲ್ಲಿ ಮಾಡಬೇಕಾದ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮ ನಡೆಸಲು ಯಾವುದು ಸೂಕ್ತ ಸ್ಥಳ ಎನ್ನುವುದರ ಬಗ್ಗೆ ಮೊದಲು ನಿರ್ಧರಿಸಬೇಕು. ಎಲ್ಲರ ಸಹಕಾರದಿಂದ ಶಿವರಾತ್ರಿ ಪ್ರಯುಕ್ತ ಶಿವತಾಣದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಸಹಾಯಕ ಆಯುಕ್ತೆ ಡಾ. ನಯನಾ, ಭಟ್ಕಳ ಉಪವಿಭಾಗದ ಡಿ.ವೈ.ಎಸ್.ಪಿ. ಮಹೇಶ, ತಹಸೀಲ್ದಾರ ತಿಪ್ಪೇಸ್ವಾಮಿ, ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿ.ಡಿ. ಮೊಗೇರ, ಮುರುಡೇಶ್ವರ ದೇವಸ್ಥಾನ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಈ ವಿಡಿಯೋ ನೋಡಿ : ಸರ್ಕಾರಿ ನೌಕರರ ವಾಲಿಬಾಲ್ ಪಂದ್ಯಾವಳಿ https://fb.watch/qwwlpzsET1/?mibextid=Nif5oz