ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ ಉ.ಕ. ಲೋಕಸಭೆ ಕ್ಷೇತ್ರದಲ್ಲಿ ಮೇ ೭ ರಂದು ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ತಕ್ಷಣದಿಂದಲೇ ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ತಿಳಿಸಿದ್ದಾರೆ.

ಇದನ್ನೂ ಓದಿ : ಕಾಲ್ನಡಿಗೆಯಲ್ಲೇ ಮನೆಗೆ ತೆರಳಿದ ಬೆಳಗಾವಿ ಮೇಯರ್!

ಅವರು ಇಂದು(ಮಾ.೧೬) ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಲೋಕಸಭೆ ಚುನಾವಣಾ ಪ್ರಯುಕ್ತ ಏಪ್ರಿಲ್ ೧೨ ರಂದು ನೋಟಿಫಿಕೇಶನ್ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಏ. 19 ಕೊನೆಯ ದಿನ. ಏ. 20 ನಾಮಪತ್ರ ಪರಿಶೀಲನೆ, ಏ. 22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ ೭ರಂದು ಮತದಾನ ನಡೆಯಲಿದೆ. ಜೂನ್ ೪ ರಂದು ಜೂನ್ ಮತ ಎಣಿಕೆ ನಡೆಯಲಿದೆ ಎಂದರು.

ಈ ವಿಡಿಯೋ ನೋಡಿ : ಬದ್ರಿಯಾ ಕಾಲೋನಿಯಲ್ಲಿ ಮನೆಗೆ ಬೆಂಕಿ  https://fb.watch/qRs5PFL3Uu/?mibextid=Nif5oz

ಉ.ಕ. ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಿತ್ತೂರು, ಖಾನಾಪುರ, ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ, ಯಲ್ಲಾಪುರ ಸೇರಿ ೮ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಒಟ್ಟು ೧೬,೨೨,೮೫೭ ಮತದಾರರಿದ್ದು, ೮,೧೫,೫೯೯ ಪುರುಷರು, ೮,೦೭,೨೪೨ ಮಹಿಳೆಯರು, ೧೬ ಅನ್ಯ ಲಿಂಗಿ ಮತದಾರರು ಇದ್ದಾರೆ. ಒಟ್ಟು ೧೯೭೭ ಮತಗಟ್ಟೆಗಳನ್ನು ತೆರೆಯಲಾಗುವುದು ಎಂದರು.

ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಒಟ್ಟು ೨೫ ಚೆಕ್‌ಪೋಸ್ಟ್ ತರೆಯಲಾಗಿವೆ. ಇಂದಿನಿಂದಲೇ(ಮಾ.೧೬) ಎಲ್ಲಾ ಚೆಕ್ ಪೋಸ್ಟ್ ಗಳು ಕಾರ್ಯಾರಂಭ ಮಾಡಿವೆ. ದಿನದ ೨೪ ಗಂಟೆ ಈ ಚೆಕ್‌ಪೋಸ್ಟ್ಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಈ ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ನಿಟ್ಟಿನಲ್ಲಿ ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವೇಲೆನ್ಸ್ ತಂಡ, ವಿಡಿಯೋ ವೀಕ್ಷಣಾ ತಂಡ, ಅಂಕಿ-ಅಂಶ ಪರಿಶೀಲನಾ ತಂಡ, ಸೆಕ್ಟರ್ ಅಧಿಕಾರಿಗಳು, ಲೆಕ್ಕಪತ್ರ ತಂಡ ಸೇರಿದಂತೆ ವಿವಿಧ ತಂಡಗಳಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಅವರಿಗೆ ಸೂಕ್ತ ತರಬೇತಿ ನೀಡಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಿಂಗಲ್ ವಿಂಡೋ ಸಮಿತಿ, ಎಂಸಿಎಂಸಿ ಸಮಿತಿ, ಮೀಡಿಯಾ ಸ್ಕೂಟನಿ ತಂಡ, ಲೆಕ್ಕಪತ್ರ ಪರಿಶೀಲನಾ ತಂಡ ಮತ್ತು ದೂರು ನಿರ್ವಹಣಾ ತಂಡಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆ ನಡೆಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಯಾವುದೇ ಅಗತ್ಯ ಮಾಹಿತಿಗಾಗಿ ಉಚಿತ ಸಹಾಯವಾಣಿ ಸಂಖ್ಯೆ ೧೯೫೦ ಗೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆಗಳ ಮೂಲಕ ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು ಜಿ.ಪಂ ಸಿಇಒ ಈಶ್ವರ ಕಾಂದೂ ತಿಳಿಸಿದರು.
ಎಡಿಸಿ ಪ್ರಕಾಶ್ ರಜಪೂತ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಜಿಲ್ಲೆಯಲ್ಲಿನ 1435 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಒಟ್ಟು 2489 ಪೊಲೀಸ್ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮತದಾನ ದಿನದಂದು ಕರ್ತವ್ಯ ನಿರ್ವಹಿಸಲು ಹೆಚ್ಚುವರಿಯಾಗಿ ಕೇಂದ್ರ ಭದ್ರತಾ ಸಿಬ್ಬಂದಿ ಮತ್ತು ರಾಜ್ಯ ಪೊಲೀಸ್ ಪಡೆಗಳ ಆಗಮನವಾಗಲಿದೆ.
ವಿಷ್ಣುವರ್ಧನ್, ಎಸ್ಪಿ