ಭಟ್ಕಳ ಡೈರಿ ವರದಿ

ಭಟ್ಕಳ: ಆಧುನಿಕತೆಯ ಭರಾಟೆಯ ನಡುವೆಯೂ ಪೂರ್ವಜರು ಹಾಕಿಕೊಟ್ಟ ಧಾರ್ಮಿಕ ಸಂಪ್ರದಾಯವನ್ನು ಇಂದಿಗೂ ಅಷ್ಟೇ ಶ್ರದ್ಧೆ ಮತ್ತು ಭಕ್ತಿಯಿಂದ ಮುಂದುವರಿಸಿಕೊಂಡು ಬರುತ್ತಿರುವ ಆಸರಕೇರಿ ಗ್ರಾಮದ ನಾಮಧಾರಿ ಸಮಾಜದ ಒಗ್ಗಟ್ಟು ನಿಜಕ್ಕೂ ವಿಶೇಷ. ತಾಲೂಕಿನ ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುವ ಕಾರ್ತಿಕ ಭಜನೋತ್ಸವವು ಭಕ್ತಿ, ಸಂಪ್ರದಾಯ ಹಾಗೂ ಗ್ರಾಮೀಣ ಸಾಂಸ್ಕೃತಿಕ ಪರಂಪರೆಯ ಅಪೂರ್ವ ಸಂಗಮವಾಗಿದೆ.

ತಲೆತಲಾಂತರಗಳಿಂದ ಗ್ರಾಮಸ್ಥರು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಈ ಭಜನೋತ್ಸವವು ಕಾರ್ತಿಕ ಮಾಸದಲ್ಲಿ ೨೪ ದಿನಗಳ ಕಾಲ ನಡೆಯುತ್ತದೆ. ಪ್ರತಿದಿನ ಸೂರ್ಯಾಸ್ತದ ಬಳಿಕ ಆರಂಭವಾಗುವ ಭಜನಾ ಕಾರ್ಯಕ್ರಮದಿಂದ ಆಸರಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗುತ್ತದೆ.

ದೀಪಗಳ ಬೆಳಕಿನಲ್ಲಿ ಭಜನಾ ಮೆರವಣಿಗೆ: ಈ ಭಜನೋತ್ಸವದ ಭಜನಾ ಮೆರವಣಿಗೆ ಇಲ್ಲಿನ ಪ್ರಮುಖ ವಿಶೇಷತೆ. ಮೊದಲ ೨೩ ದಿನಗಳಂದು ಆಸರಕೇರಿಯಿಂದ ಆರಂಭವಾಗುವ ಮೆರವಣಿಗೆ ಕರಿಬಂಟ ದೇವಸ್ಥಾನ, ಕಳಿ ಹನುಮಂತ ದೇವಸ್ಥಾನ ನಂತರ ಸ್ವಲ್ಪ ಮುಂದೆ ಸಾಗಿ, ಮರಳಿ ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ, ವನದುರ್ಗಿ ಹಾಗೂ ಸೋನಾರಕೇರಿ ಮೂಲಕ ಮತ್ತೆ ದೇವಸ್ಥಾನಕ್ಕೆ ಮರಳುತ್ತದೆ. ಭಜನಾ ತಂಡ ಸಾಗುವ ಮಾರ್ಗದಲ್ಲಿನ ಮನೆಗಳು ಹಾಗೂ ಅಂಗಡಿಗಳ ಮುಂಭಾಗದಲ್ಲಿ ಎಲ್ಲ ಸಮಾಜದ ಗ್ರಾಮಸ್ಥರು ರಂಗೋಲಿ ಬಿಡಿಸಿ ದೀಪಗಳನ್ನು ಬೆಳಗಿಸುತ್ತಾರೆ. ಮೆರವಣಿಗೆಯಲ್ಲಿ ಸಾಗುವ ಭಜನಾ ತಂಡವು ಈ ದೀಪಗಳಿಗೆ ಪ್ರದಕ್ಷಿಣೆ ಹಾಕಿ ಮೆರವಣಿಗೆ ಮುಂದುವರಿಸುವುದು ಇಲ್ಲಿನ ವಿಶಿಷ್ಟ ಸಂಪ್ರದಾಯವಾಗಿದೆ.

ಮಂಗಲೋತ್ಸವಕ್ಕೆ ಭವ್ಯ ಮೆರವಣಿಗೆ: ಕಾರ್ತಿಕ ಭಜನೋತ್ಸವದ ಕೊನೆಯ ದಿನ ನಡೆಯುವ ಭಜನಾ ಮಂಗಲೋತ್ಸವವು ಅತ್ಯಂತ ವೈಭವದಿಂದ ಜರುಗುತ್ತದೆ. ಅಂದು ಭಜನಾ ಮೆರವಣಿಗೆಯು ಸೋನಾರಕೇರಿ ಮೂಲಕ ಭಟ್ಕಳ ನಗರ ಪೊಲೀಸ್ ಠಾಣೆ, ಪಿಎಲ್‌ಡಿ ಬ್ಯಾಂಕ್ ಸರ್ಕಲ್, ಮರಳಿ ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ, ಕರಿಬಂಟ ದೇವಸ್ಥಾನ ಹಾಗೂ ಕಳಿ ಹನುಮಂತ ದೇವಸ್ಥಾನದ ಮೂಲಕ ಮಣ್ಕುಳಿಯ ಪುಷ್ಪಾಂಜಲಿ ಟಾಕೀಸ್‌ವರೆಗೆ ಸಾಗುತ್ತದೆ. ಅಲ್ಲಿಂದ ಮರಳಿ ವಿ.ವಿ. ರಸ್ತೆ ಮೂಲಕ ನಾಗಯಕ್ಷೆ ದೇವಸ್ಥಾನ, ನೆಹರು ರಸ್ತೆ, ಚನ್ನಪಟ್ಟಣ ಹನುಮಂತ ದೇವಸ್ಥಾನ ಹಾಗೂ ಮಾರಿಕಾಂಬ ದೇವಸ್ಥಾನದ ಮಾರ್ಗವಾಗಿ ಆಸರಕೇರಿ ಮೂಲಕ ದೇವಸ್ಥಾನದಲ್ಲಿ ಮೆರವಣಿಗೆ ಸಂಪನ್ನಗೊಳ್ಳುತ್ತದೆ.

ಈ ಸಂದರ್ಭ ಭಟ್ಕಳ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ವಿವಿಧ ಪ್ರದೇಶಗಳಿಂದಲೂ ಭಕ್ತರು ಭಾಗವಹಿಸುತ್ತಾರೆ. ರಘುನಾಥ ರಸ್ತೆ, ಮಣ್ಕುಳಿ, ಪುಷ್ಪಾಂಜಲಿ, ವಡೇರಮಠ, ಕಾಶಿಮಠ ಸೇರಿದಂತೆ ವಿವಿಧ ಭಾಗಗಳ ಭಕ್ತರು ಭಜನಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.

ಕುಣಿತ ಭಜನೆ ಪ್ರಮುಖ ಆಕರ್ಷಣೆ: ಮಂಗಲೋತ್ಸವದ ಸಂದರ್ಭದಲ್ಲಿ ನಡೆಯುವ ಕುಣಿತ ಭಜನಾ ಕಾರ್ಯಕ್ರಮವು ಭಕ್ತರ ಪ್ರಮುಖ ಆಕರ್ಷಣೆಯಾಗಿದೆ. ನೂರಾರು ಭಕ್ತರು ಈ ಅಪರೂಪದ ಧಾರ್ಮಿಕ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಾರೆ. ಭಜನೆ, ಕುಣಿತ ಹಾಗೂ ಸಾಮೂಹಿಕ ಭಕ್ತಿಯ ಮೂಲಕ ಇಡೀ ಪರಿಸರವೇ ಧಾರ್ಮಿಕ ಸಂಭ್ರಮದಲ್ಲಿ ಮಿಂದೇಳುತ್ತದೆ.

ಸಮಾಜದ ಒಗ್ಗಟ್ಟು: ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಹಿರಿಯರು ನಡೆಸಿಕೊಂಡು ಬಂದ ಧಾರ್ಮಿಕ ಆಚರಣೆಗಳನ್ನು ಯಾವುದೇ ಲೋಪವಿಲ್ಲದೆ ಮುಂದುವರಿಸಿಕೊಂಡು ಹೋಗುತ್ತಿರುವ ಆಸರಕೇರಿ ನಾಮಧಾರಿ ಸಮಾಜದ ಪ್ರಯತ್ನ ಶ್ಲಾಘನೀಯವಾಗಿದೆ.

ಹೊಸ ಪೀಳಿಗೆಗೂ ಈ ಸಂಪ್ರದಾಯವನ್ನು ಪರಿಚಯಿಸುವುದರೊಂದಿಗೆ ಭಕ್ತಿ, ಶ್ರದ್ಧೆ, ಸಾಮೂಹಿಕ ಸೇವೆ ಹಾಗೂ ಗ್ರಾಮೀಣ ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿರಿಸುವಲ್ಲಿ ಕಾರ್ತಿಕ ಭಜನೋತ್ಸವ ಮಹತ್ವದ ಪಾತ್ರ ವಹಿಸುತ್ತಿದೆ ಎನ್ನುತ್ತಾರೆ ಆಸರಕೇರಿ ಗ್ರಾಮಸ್ಥರಾದ ಶ್ರೀಕಾಂತ ನಾಯ್ಕ ಮತ್ತು ಪಾಂಡು ನಾಯ್ಕ. ದೀಪಗಳ ಬೆಳಕು, ಭಜನೆಯ ನಾದ ಮತ್ತು ಭಕ್ತರ ಒಗ್ಗಟ್ಟಿನೊಂದಿಗೆ ನಡೆಯುವ ಆಸರಕೇರಿಯ ಈ ೨೪ ದಿನಗಳ ಧಾರ್ಮಿಕ ಉತ್ಸವವು ಭಟ್ಕಳದ ವಿಶಿಷ್ಟ ಧಾರ್ಮಿಕ ಪರಂಪರೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಇದನ್ನೂ ಓದಿ :

ಭಟ್ಕಳದ ಶಿಕ್ಷಣ ಅಭಿವೃದ್ಧಿಗೆ ಕೈಜೋಡಿಸಿದ ಕೊಂಕಣ ಖಾರ್ವಿ ಸಮಾಜ

ಭಟ್ಕಳದಲ್ಲಿ ವಿದ್ಯುತ್ ಸಮಸ್ಯೆಗೆ ದಶಕಗಳ ಇತಿಹಾಸ: ಮಳೆ ಕಡಿಮೆಯಾದರೂ ವಿದ್ಯುತ್ ಕಣ್ಣಾಮುಚ್ಚಾಲೆ, ಅಸಮಾಧಾನ