ಶಿವಮೊಗ್ಗ : ಇತಿಹಾಸ ಪ್ರಸಿದ್ಧ ಹೊಸನಗರ ತಾಲೂಕಿನ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ದೇವಸ್ಥಾನವನ್ನು ರಾಜ್ಯದಲ್ಲಿ ಆತ್ಯುತ್ತಮ ಮಾದರಿ ಪ್ರೇಕ್ಷಣಿಯ ಯಾತ್ರಾ ಕ್ಷೇತ್ರವನ್ನಾಗಿಸುವ ಮಹಾದಾಸೆ ಹೊಂದಿದ್ದೇನೆ. ಈ ಹಿಂದಿನ ಅವಧಿಯಲ್ಲಿ ಈ ದೇವಸ್ಥಾನವನ್ನು ಶಿಲಾಮಯ ದೇವಸ್ಥಾನವನ್ನಾಗಿಸಲು ಸರ್ಕಾರದಿಂದ ೧.೫೦ ಕೋಟಿ ಆನುದಾನವನ್ನು ಬಿಡುಗಡೆ ಮಾಡಲಾಗಿದ್ದು, ನನ್ನ ಅವಧಿಯಲ್ಲಿಯೇ ಪೂರ್ಣವಾಗಬೇಕಾಗಿತ್ತು. ಅದರೆ ರಾಜಕೀಯ ವ್ಯತ್ಯಾಸದಿಂದಾಗಿ ಪೂರ್ಣವಾಗಿಲ್ಲ ಎಂದು ಮಾಜಿ ಮಂತ್ರಿ ಹರತಾಳು ಹಾಲಪ್ಪ ಹೇಳಿದರು.

ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನಕ್ಕೆ ನೂರಾರು ವರ್ಷದ ಇತಿಹಾಸವಿದೆ. ಲಕ್ಷಾಂತರ ಜನ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಪಡೆದುಕೊಂಡು ಹೋಗುತ್ತಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸುವುದರೊಂದಿಗೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದ್ದರೆ ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಐದು ವರ್ಷದ ಅವಧಿಯಲ್ಲಿ ೧೦ ಕೋಟಿ ಅನುದಾನವನ್ನು ತರುತ್ತಿದ್ದೆ. ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸುಮಾರು ೨೩ ಎಕರೆ ಜಾಗವಿದ್ದು, ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯೊಂದಿಗೆ ರಾಜ್ಯದಲ್ಲಿ ಅತ್ಯುತ್ತಮ ಮಾದರಿ ಯಾತ್ರಾ ಸ್ಥಳವನ್ನಾಗಿಸುವ ಸಂಕಲ್ಪ ನನ್ನದಾಗಿತ್ತು ಎಂದರು.

ಇದೇ ಸಂದರ್ಭದಲ್ಲಿ ಹರತಾಳು ಹಾಲಪ್ಪರವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಧರ್ಮದರ್ಶಿ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್, ಎಪಿಎಂಸಿ ಮಾಜಿ ನಿರ್ದೇಶಕ ಕಲ್ಯಾಣಪ್ಪಗೌಡ, ಪ್ರಧಾನ ಕಾರ್ಯದರ್ಶಿ ಸುಧೀರ್ ಭಟ್, ತಾ.ಪಂ. ಮಾಜಿ ಅಧ್ಯಕ್ಷ ವೀರೇಶ್ ಅಲವಳ್ಳಿ, ಕೋಡೂರು ವಿಜೇಂದ್ರ ಭಟ್, ಹರೀಶ್‌ಗೌಡ, ಡಾಕಪ್ಪ ಬೆಳ್ಳೂರು, ರತ್ನಮ್ಮ, ತಿಮ್ಮಪ್ಪ, ಕೋಡೂರು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಜಯಪ್ರಕಾಶ ಶೆಟ್ಟಿ ಇನ್ನಿತರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.