ಹುಬ್ಬಳ್ಳಿ: ಕೇಂದ್ರ ಸಚಿವ ಜೋಶಿ ಅವರ ಬದಲಾವಣೆಗೆ ಕೊಟ್ಟ ಸಮಯ ಮುಗಿದಿದೆ. ಇದೀಗ ನಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಮುಂದೆ ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಶಿರಹಟ್ಟಿಯ ಫಕೀರ್ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
ಇದನ್ನೂ ಓದಿ : ಹಿಂಡಲಗಾ ಜೈಲಿನ ಮೇಲೆ ಪೊಲೀಸ್ ದಾಳಿ
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ನಿರ್ಧಾರ ಚರ್ಚಿಸಲು ಏ. ೨ರಂದು ಧಾರವಾಡದಲ್ಲಿ ಭಕ್ತರ ಸಭೆ ಕರೆಯಲಾಗಿದೆ. ಅಂದು ತೆಗೆದುಕೊಳ್ಳುವ ನಿರ್ಧಾರದ ಆಧಾರದ ಮೇಲೆ ನಮ್ಮ ನಡೆ ನಿಲ್ಲಲಿದೆ ಎಂದು ಹೇಳಿದ್ದಾರೆ.
ನಿರಂತರ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಪ್ರಲ್ಹಾದ್ ಜೋಶಿ ಬದಲಾವಣೆಗೆ ಪಟ್ಟು ಹಿಡಿದ ಬಳಿಕ ಬಹುಸಂಖ್ಯಾತ ನಾಯಕರು ದೂರವಾಣಿ ಮೂಲಕ, ಪ್ರತ್ಯೇಕವಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಅದಕ್ಕೆ ಜಗದಿದ್ದಾಗ ಬೆದರಿಕೆ ಕರೆಗಳು ಬಂದಿವೆ. ನಿಮ್ಮ ಮಾನ, ಪ್ರಾಣ ಹಾನಿ ಮಾಡುವ ಕೆಲಸದ ಬೆದರಿಕೆ ಹಾಕಿದ್ದಾರೆ. ಆದರೆ ಕೇಂದ್ರ ಸಚಿವರಿಂದ ಅನ್ಯಾಯಕ್ಕೆ ಒಳಗಾದ ಜನರಿಗೆ ಸಾಂತ್ವನ ಹೇಳಲು ನಮ್ಮ ಪ್ರಾಣ, ಮಾನ ಹೋದರೂ ಸರಿ, ನಮ್ಮ ನಿಲುವು ಬದಲಾವಣೆ ಆಗದು. ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದಿದ್ದಾರೆ.
ಹಿನ್ನೆಲೆ :
ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಕೇಂದ್ರ ಸಚಿವ ಜೋಶಿ ಅವರಿಂದ ದಮನಕಾರಿ ಆಡಳಿತ ನಡೆಯುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲಿಂಗಾಯತ ಸಮುದಾಯ ಸೇರಿದಂತೆ ಇತರ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಅವರ ಬದಲಾವಣೆ ಮಾಡಬೇಕು ಎಂದು ದಿಂಗಾಲೇಶ್ವರ ಶ್ರೀಗಳು ಪಟ್ಟು ಹಿಡಿದಿದ್ದರು.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಶ್ರೀಗಳು ಚಿಂತನ-ಮಂಥನ ಸಭೆ ನಡೆಸಿದ್ದರು. ಆ ಮೂಲಕ ಬಿಜೆಪಿ ಹೈಕಮಾಂಡಗೆ ಮಾ.31 ರೊಳಗೆ ಜೋಶಿ ಅವರನ್ನು ಬೇರೆಡೆ ಬದಲಾವಣೆ ಮಾಡಬೇಕು. ಆ ಕ್ಷೇತ್ರಕ್ಕೆ ಲಿಂಗಾಯತ ಸಮುದಾಯದ ನಾಯಕನನ್ನು ನಿಲ್ಲಿಸಿ ಗೆಲ್ಲಿಸಬೇಕೆಂದು ನಿರ್ಣಯಿಸಲಾಗಿತ್ತು. ಆ ಬೆನ್ನಲ್ಲೇ ಅನೇಕ ಮಠಾಧಿಪತಿಗಳು, ಲಿಂಗಾಯತ ನಾಯಕರು ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ಮತ್ತೆ ಕೆಲವರು ದಿಂಗಾಲೇಶ್ವರ ಶ್ರೀಗಳ ಪರವಾಗಿ ಬೆಂಬಲ ಸೂಚಿಸಿದ್ದರು.
ಸ್ವತಃ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ದಿಂಗಾಲೇಶ್ವರ ಶ್ರೀಗಳಿಗೆ ತಪ್ಪು ಕಲ್ಪನೆ ಆಗಿದೆ. ಅದನ್ನು ಬಗೆಹರಿಸಲಾಗುವುದು. ಈ ಬಗ್ಗೆ ಚರ್ಚಿಸಲು ಅವರು ಸಮಯ ಕೊಡಬೇಕು. ಅವರ ಹೇಳಿಕೆಗಳು ನಮಗೆ ಆರ್ಶೀವಾದ ಎಂದು ಹೇಳಿದ್ದರು.