ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ರಾಜ್ಯದಲ್ಲಿ ಇಂದು(ಏ.೨೮) ಅವರು ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಬೆಳಗಾವಿಯಲ್ಲಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ನಿನ್ನೆ ರಾತ್ರಿ ಬಂದಿಳಿದ ಮೋದಿ ಅವರಿಗೆ ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌, ಚಿಕ್ಕೋಡಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆ, ನಿಪ್ಪಾಣಿ ಶಾಸಕಿ ಶಶಿಕಲಾ ‌ಜೊಲ್ಲೆ ಸೇರಿ ಗಣ್ಯರು ಸ್ವಾಗತ ಕೋರಿದರು.
ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ನಾಯಕರ ಜತೆಗೆ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ೧೫ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿತ್ತು. ಬಾಳೇಶ ಚವ್ವನ್ನವರ್, ರಾಜೇಶ್ವರಿ ಒಡೆಯರ್, ಸುಭಾಷ್ ಸಣ್ಣ ವೀರಪ್ಪನವರ್ ಸೇರಿ ಬೆಳಗಾವಿಯ ೧೫ ಹಲವು ಸಮುದಾಯಗಳ ಮುಖಂಡರು ಮೋದಿ ಅವರನ್ನು ಸ್ವಾಗತಿಸಿದರು.

ಎಳನೀರು ಸೇವಿಸಿದ ಮೋದಿ :
ನಗರದ ಕಾಕತಿಯಲ್ಲಿರುವ ಐಟಿಸಿ ವೆಲ್‌ಕಮ್‌ ಹೋಟೆಲ್‌ನಲ್ಲಿ ಮೋದಿ ಅವರು ವಾಸ್ತವ್ಯ ಮಾಡಿದ್ದರು. ಅವರಿಗಾಗಿ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಗುಜರಾತಿ ಸೇರಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಶೈಲಿಯ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಮೂವತ್ತಕ್ಕೂ ಹೆಚ್ಚು ಬಗೆಯ ಪದಾರ್ಥಗಳನ್ನು ತಯಾರಿಸಲಾಗಿತ್ತು. ಇವುಗಳಲ್ಲಿ ರಾಗಿ ಮುದ್ದೆ, ಜೋಳದ ರೊಟ್ಟಿ, ಟೊಮ್ಯಾಟೊ ‌ಸಾರು,‌ ದಾಲ್ ಕೂಡ ಸೇರಿವೆ. ಊಟಕ್ಕಾಗಿ ಸುಮಾರು ಮೂವತ್ತಾರು ಬಗೆಯ ಆಹಾರ ಸಿದ್ಧಪಡಿಸಲಾಗಿತ್ತು. ಆದರೆ ಮೋದಿ ಅವರು ಎಳನೀರು ಮಾತ್ರ ಸೇವಿಸಿದರು ಎಂದು ಮೂಲಗಳು ತಿಳಿಸಿವೆ.

ಮೋದಿಯವರು ಕೊಲ್ಲಾಪುರದಿಂದ ನೇರವಾಗಿ ಬೆಳಗಾವಿಗೆ ಆಗಮಿಸುವರು ಎಂದು ಹೇಳಲಾಗಿತ್ತು. ಆದರೆ ಅವರು ಕೊಲ್ಲಾಪುರದಿಂದ ಗೋವಾಕ್ಕೆ ತೆರಳಿದರು. ಅಲ್ಲಿ ಚುನಾವಣಾ ಪ್ರಚಾರ ನಡೆಸಿ ರಾತ್ರಿ ಬೆಳಗಾವಿಗೆ ಆಗಮಿಸಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಬಂದ ಅವರು ನೇರವಾಗಿ ಕಾಕತಿ ಬಳಿಯ ಐಟಿಸಿ ವೆಲ್ ಕಮ್ ಹೋಟೆಲ್ ಗೆ ತೆರಳಿದರು. ರಾತ್ರಿ ಆಗಮಿಸಿದ ಕಾರಣ ಅವರು ಯಾವ ನಾಯಕರ ಜೊತೆ ಯಾವ ರಾಜಕೀಯ ಚರ್ಚೆಯನ್ನು ನಡೆಸಿಲ್ಲ.

ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸುಮಾರು ಒಂದು ಗಂಟೆ ಕಾಲ ಸಂಚಾರ ವ್ಯವಸ್ಥೆ ನಿಲುಗಡೆಯಾಗಿತ್ತು.
ಬೆಳಗಾವಿ ಮಾರ್ಗದಲ್ಲಿ ಮೋದಿ ತೆರಳುತ್ತಿದ್ದಾಗ ಭಾರೀ ಸಂಖ್ಯೆಯಲ್ಲಿ ಜನ ನಿಂತು ಕಣ್ತುಂಬಿಕೊಂಡರು.
ಒಟ್ಟಾರೆ, ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಿದ ನಂತರ ಜಿಲ್ಲೆಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ.

ಪ್ರಧಾನಿ ಮೋದಿಯವರು ಬಂದಿಳಿದ ತಕ್ಷಣ ಎಷ್ಟೊತ್ತಿನಿಂದ ನಿಂತಿದ್ದಿರಿ ಎಂದು ಕೇಳಿದ್ರು. ನಾವು 6 ಗಂಟೆಯಿಂದ ನಿಂತಿದ್ದಿವಿ ಅಂತಾ ಹೇಳಿದ್ವಿ. ಆಗ ಎಲೆಕ್ಷನ್ ಟೈಂನಲ್ಲಿ ಜಾಸ್ತಿ ಹೊತ್ತು ನಿಂತಿದ್ರಲ್ಲ ಅಂದ್ರು. ಅದಕ್ಕೆ ನಾವು ನಿಮ್ಮನ್ನು ನೋಡುವುದೇ ಒಂದು ಭಾಗ್ಯ ಅಂದ್ವಿ. ಅವರನ್ನು ನೋಡಿ ಶ್ರೀರಾಮನನ್ನು ನೋಡಿದಷ್ಟು ಆನಂದವಾಯ್ತು. ಪ್ರಧಾನಿ ಮೋದಿ ಆಗಮಿಸಿದಾಗ ನಾವು ಅಬ್‌ ಕೀ ಬಾರ್.. ಎಂದಾಗ ಚಾರ್ ಸೋ ಪಾರ್ ಎಂದು ಮೋದಿಯವರು ಹೇಳಿದ್ರು. ಅವರನ್ನು ವೆಲ್ ಕಮ್ ಮಾಡುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ.
– ಸಂಗೀತಾ, ಯಮಕನಮರಡಿ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ.

ಇದನ್ನೂ ಓದಿ : ರಾಮತೀರ್ಥದ ಶ್ರೀಧರ ಆಶ್ರಮಕ್ಕೆ ಪೇಜಾವರ ಶ್ರೀ