ಭಟ್ಕಳ: ಅನಿವಾಸಿ ಭಾರತೀಯ ಯೂನಿಸ್ ಕಾಳಜಿಯವಾರ ಪುತ್ರಿಯ ಮದುವೆಗೆ ಬಂದ ಗೃಹಸಚಿವ ಡಾ.ಪರಮೇಶ್ವರ ಅವರು ಭಟ್ಕಳ ಪೊಲೀಸ ಮೈದಾನದಲ್ಲಿ 3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಪೊಲೀಸ ವಸತಿ ಸಂಕೀರ್ಣ ಉದ್ಘಾಟನೆ ಮಾಡಿದರು.

ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 46 ಸಾವಿರ ಪೊಲೀಸ ವಸತಿ ಗೃಹ ಈಗಾಗಲೇ ನಮ್ಮ ಸರ್ಕಾರ ನಿರ್ಮಾಣ ಮಾಡಿದೆ. ಇದರಿಂದಾಗಿ ಪೊಲೀಸ ಸಿಬ್ಬಂದಿಗೆ ಕೆಲಸ ಮಾಡಲು ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ ಎಂದರು. ಅಂತರ ಜಿಲ್ಲಾ ವರ್ಗಾವಣೆ ಪ್ರಶ್ನೆಗೆ ಉತ್ತರಿಸಿದ ಅವರು, ಬೇರೆ ಇಲಾಖೆಗೂ ಹಾಗೂ ನಮ್ಮ ಇಲಾಖೆಗೂ ವ್ಯತ್ಯಾಸವಿದ್ದು ಯಾವುದೋ ಒಂದು ಪ್ರಕರಣ ವಿಚಾರಣೆ ಹಂತದಲ್ಲಿದ್ದ ವೇಳೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಇತಿಮಿತಿಗಳು ಬದಲಾವಣೆ ಆಗುವ ಸಂಭವವಿರುತ್ತದೆ. ಇದರಿಂದ ನಮ್ಮ ರಾಜ್ಯದಲ್ಲಿ ನಮ್ಮ ಇಲಾಖೆಯ ಅಂತರ ಜಿಲ್ಲಾ ವರ್ಗಾವಣೆಯನ್ನು ಅಚ್ಚುಕಟ್ಟಾಗಿ ಮುಂದಿನ ದಿನಗಳಲ್ಲಿ ಆಯ್ಕೆ ಮಾಡುತ್ತೇವೆ ಎಂದರು.

ಭಟ್ಕಳದಲ್ಲಿ ಕಳೆದ ಹಲವು ವರ್ಷಗಳಿಂದ ಸಿಸಿಟಿವಿ ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದರ ಬಗ್ಗೆ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಚೆಕ್ ಪೋಸ್ಟ್ ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದು ಹಾಗೂ ಭಟ್ಕಳದಲ್ಲಿ ಟ್ರಾಫಿಕ್ ಪೊಲೀಸ ಠಾಣೆ ನಿರ್ಮಾಣವಾಗುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪೊಲೀಸ ಇಲಾಖೆ ಹೊಸದಾಗಿ ಆಧುನೀಕರಣಗೊಳ್ಳುತ್ತಿದೆ. ಸಾವಿರಾರು ಸಿಸಿಟಿವಿ ಕ್ಯಾಮರಾ, ಅದಕ್ಕೆ ಬೇಕಾಗುವ ತಂತ್ರಜ್ಞಾನವನ್ನು ಉಪಯೋಗಿಸುವುದಕ್ಕೆ ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆಯ ಲಿಂಕ್ ಅನ್ನು ನಮ್ಮ ಬೆಂಗಳೂರು ಮಹಾ ನಿರ್ದೇಶಕರ ಕಛೇರಿಯಲ್ಲಿದ್ದು ವೀಕ್ಷಣೆ ಮಾಡಬಹುದಾಗಿದೆ. ಎಲ್ಲಾ ಬದಲಾವಣೆಯನ್ನು ಹಂತ ಹಂತವಾಗಿ ಮಾಡುತ್ತೇವೆ ಎಂದರು.

ಇದಕ್ಕೂ ಪೂರ್ವದಲ್ಲಿ ವಸತಿಗೃಹದ ಕೀಯನ್ನು ಪೊಲೀಸ ಸಿಬ್ಬಂದಿಗೆ ಹಸ್ತಾಂತರ ಮಾಡಿದರು. ನಂತರ ವಸತಿ ಸಂಕೀರ್ಣದ ಮುಂಭಾಗದಲ್ಲಿ ಗಿಡ ನೆಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ,ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ವಿಷ್ಣುವರ್ಧನ್, ಭಟ್ಕಳ ಪ್ರಾಭಾರಿ ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ನಗರ ಹಾಗೂ ಗ್ರಾಮೀಣ ಠಾಣೆ ಸಿ.ಪಿ.ಐ ಗೋಪಿಕೃಷ್ಣ ಹಾಗೂ ಚಂದನ್ ಗೋಪಾಲ್, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್
ಭಟ್ಕಳ ಹಾಗೂ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಗೋವಿಂದ ನಾಯ್ಕ ಉಪಸ್ಥಿತರಿದ್ದರು