ಭಟ್ಕಳ ಡೈರಿ ವರದಿ
ಭಟ್ಕಳ: ಸಮಾಜ ಸೇವೆ, ಜ್ಞಾನಾರ್ಜನೆ ಹಾಗೂ ಓದುವ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಭಟ್ಕಳದ ಇಬ್ಬರು ಸಾಧಕರನ್ನು ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿ ಗೌರವಿಸಿದೆ. ರಾಜೋತ್ಸವ ಮಾಸದ ಅಂಗವಾಗಿ ಹಮ್ಮಿಕೊಂಡ ‘ಸಾಧಕರೆಡೆಗೆ ಸಾಹಿತ್ಯ ಪರಿಷತ್ತು’ ಕಾರ್ಯಕ್ರಮದಡಿ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಭಟ್ಕಳ ಶಹರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ನವೀನ ನಾಯ್ಕ ಹಾಗೂ ಮಾತಾ ಗ್ರಂಥಾಲಯದ ಗ್ರಂಥಪಾಲಕ ವಸಂತ ಭಟ್ ಅವರನ್ನು ಸನ್ಮಾನಿಸಲಾಯಿತು.
ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ನವೀನ ನಾಯ್ಕ ಅವರನ್ನು ಶಹರ ಪೊಲೀಸ್ ಠಾಣೆಯಲ್ಲಿ ಹಾಗೂ ವಸಂತ ಭಟ್ ಅವರನ್ನು ಕಡವಿನಕಟ್ಟೆ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಎಸ್ಐ ನವೀನ ನಾಯ್ಕ, ಪೊಲೀಸ್ ಇಲಾಖೆಯ ಒತ್ತಡದ ಕರ್ತವ್ಯದ ನಡುವೆಯೂ ಸಾಹಿತ್ಯದ ಓದು ಜ್ಞಾನ ಹೆಚ್ಚಿಸಿಕೊಳ್ಳಲು, ಮನೋಬಲ ವೃದ್ಧಿಸಲು ಹಾಗೂ ನೆಮ್ಮದಿ ಪಡೆಯಲು ಸಹಕಾರಿಯಾಗುತ್ತದೆ ಎಂದರು. ಪೊಲೀಸ್ ಇಲಾಖೆಯ ಸಿಬ್ಬಂದಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಇಲಾಖೆಯ ಸಹಯೋಗದಲ್ಲಿ ಇನ್ನಷ್ಟು ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.
ಮಾತಾ ಗ್ರಂಥಾಲಯದ ಗ್ರಂಥಪಾಲಕ ವಸಂತ ಭಟ್ ಮಾತನಾಡಿ, ಪುಸ್ತಕ ಓದುವ ಹವ್ಯಾಸ ನಮ್ಮಲ್ಲಿ ಕಲ್ಪನಾ ಶಕ್ತಿ ಹಾಗೂ ವೈಚಾರಿಕತೆಯನ್ನು ಬೆಳೆಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಸಮಾಜವನ್ನು ಸುಸಂಸ್ಕೃತಗೊಳಿಸುವಲ್ಲಿ ಸಾಹಿತ್ಯದಷ್ಟೇ ಮಹತ್ವದ ಪಾತ್ರವನ್ನು ಸಮಾಜದ ರಕ್ಷಣೆಯಲ್ಲಿ ಪೊಲೀಸ್ ಇಲಾಖೆಯೂ ವಹಿಸುತ್ತದೆ. ಈ ನೆಲೆಯಲ್ಲಿ ನವೀನ ನಾಯ್ಕ ಅವರ ಸಾಧನೆ ಪೊಲೀಸ್ ಇಲಾಖೆಗೆ ಮಾತ್ರವಲ್ಲ, ಭಟ್ಕಳಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಭಟ್ಕಳದಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಮಾತಾ ಗ್ರಂಥಾಲಯವನ್ನು ಆರಂಭಿಸಿ ಸಾಹಿತ್ಯಾಸಕ್ತರಿಗೆ ಪುಸ್ತಕಗಳ ಲೋಕವನ್ನು ಪರಿಚಯಿಸುತ್ತಿರುವ ವಸಂತ ಭಟ್ ಅವರ ಸಾಂಸ್ಕೃತಿಕ ಕೊಡುಗೆಯನ್ನು ಪರಿಷತ್ತು ಗುರುತಿಸಿ ಗೌರವಿಸಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ತೆಲುಗಿನ ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ದೂರವಾಣಿ ಮೂಲಕ ವಸಂತ ಭಟ್ ಅವರನ್ನು ಸಂಪರ್ಕಿಸಿ, ಅವರ ಕಾರ್ಯ ಹಾಗೂ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಮಾನಾಸುತ ಶಂಭು ಹೆಗಡೆ ಅವರು ತಮ್ಮ ಕವಿತೆಯ ಮೂಲಕ ಸಾಧಕರಿಬ್ಬರಿಗೂ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ., ಪಿಎಸ್ಐ ತಿಮ್ಮಪ್ಪ, ರವಿ ಗಾಂಜೆಕರ, ಪ್ರೊಬೇಷನರಿ ಪಿಎಸ್ಐ ಬಸವರಾಜ್, ಪೊಲೀಸ್ ಸಿಬ್ಬಂದಿ ಮಂಜುನಾಥ ಯಲ್ವಡಿಕವೂರು, ಶ್ರೀಧರ ತಾಂಡೇಲ, ಮಲ್ಲಿಕಾರ್ಜುನ, ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಪಿ. ಬಂಡಾರಿ, ಪೂರ್ಣಿಮಾ ಕರ್ಕಿಕರ, ದೀಪಕ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಕನ್ನಡ ರಾಜ್ಯೋತ್ಸವ: ರಂಗಭೂಮಿ ಕಲಾವಿದ ಭಾಸ್ಕರ ನಾಯ್ಕ ಹಡೀನ ಸರ್ಪನಕಟ್ಟೆಗೆ ತಾಲೂಕು ಆಡಳಿತದ ಸನ್ಮಾನ
ಚಿತ್ರಾಪುರದ ‘ಕಲಾಸಿರಿ’ಯಲ್ಲಿ ಸಾಹಿತ್ಯ ಸಂಭ್ರಮ; ಡಾ. ಆರ್. ನರಸಿಂಹ ಮೂರ್ತಿಗೆ ಕಲಾಸಿರಿ ಪ್ರಶಸ್ತಿ ಪ್ರದಾನ



