ಬೀದರ್: ತಾಲೂಕಿನ ಅಣದೂರು ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸುವ ವಾಟರ್ ಟ್ಯಾಂಕಿನಲ್ಲಿ ಶವ ಪತ್ತೆಯಾಗಿದೆ. ಅದೇ ನೀರನ್ನು ಕುಡಿದ ಜನ ಇದೀಗ ಕಕ್ಕಾಬಿಕ್ಕಿ ಆಗಿದ್ದಾರೆ.

ಇದನ್ನೂ ಓದಿ : ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ, ದೂರು ದಾಖಲು

ಮೂರು ದಿನಗಳ ಹಿಂದೆಯೇ ಪತ್ನಿಯ ಅನೈತಿಕ ಸಂಬಂಧದಿಂದ ಮನನೊಂದು ಪತಿ ಓವರ್ ಹೆಡ್ ಟ್ಯಾಂಕ್ ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ.
ಗ್ರಾಮದ ರಾಜಕುಮಾರ್ ದಾಸ ಆತ್ಮಹತ್ಯೆ ಮಾಡಿಕೊಂಡವ. ಆತ್ಮಹತ್ಯೆ ಮಾಡಿಕೊಂಡ ಮೂರು ದಿನಗಳ ಬಳಿಕ ಶವ ಪತ್ತೆಯಾಗಿದ್ದು ನೀರು ವಾಸನೆ ಬಂದ ಕಾರಣ ಯುವಕನೊಬ್ಬ ಟ್ಯಾಂಕ್ ಹತ್ತಿ ನೋಡಿದಾಗ ವಾಟರ್ ಟ್ಯಾಂಕಿನಲ್ಲಿ ಶವ ಇರುವುದು ಬೆಳಕಿಗೆ ಬಂದಿದೆ. ಮೂರು ದಿನಗಳಿಂದ ನೀರು ಸೇವಿಸಿರುವ ಜನ ಈಗ ಆತಂಕಕ್ಕೊಳಗಾಗಿದ್ದಾರೆ. ವೈದ್ಯರು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. 1.5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕರ್ ಇದಾಗಿದೆ. ಸುಮಾರು 300 ಜನ ಈ ನೀರು ಅವಲಂಬಿಸಿದ್ದಾರೆ.

ಈ ರೀಲ್ಸ್ ನೋಡಿ : ಈಶ್ವರಪ್ಪಗೆ ಬಿ ವೈ ರಾಘವೇಂದ್ರ ಸವಾಲು

ಗ್ರಾಮದ ಮನೆ-ಮನೆಗೆ ಸರಬರಾಜು ಆಗುತ್ತಿದ್ದ ನೀರು ಗಬ್ಬು ನಾರುತಿತ್ತು. ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ದೂರನ್ನು ಸಹ ನೀಡಿದ್ದರು. ಮೊದಲಿಗೆ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣ ಆಗಿರಬಹುದು ಎಂದು ಜನ ಅನುಮಾನಪಟ್ಟಿದ್ದರು. ಕೆಲ ವೇಳೆ ನೀರಲ್ಲಿ ಕೂದಲು ಬರುತ್ತಿತ್ತು. ಕುಡಿಯಲು ಆಗದಷ್ಟು ನೀರು ಗಬ್ಬು ನಾರುತ್ತಿತ್ತು. ಇದೀಗ ಸತ್ಯ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.