ಕಾರವಾರ : ಚುನಾವಣಾ ಆಯೋಗದ ಮತದಾನ ಜಾಗೃತಿ ಕುರಿತು ಸಿದ್ದಪಡಿಸಿರುವ ವೀಡಿಯೋದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಲೆ ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳನ್ನು ಬಳಸಿಕೊಂಡು ಆಕರ್ಷಕ ವೀಡಿಯೋ ತಯಾರಿಸಲಾಗಿದೆ. ಈ ವೀಡಿಯೋಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ವಿಡಿಯೋ ನೋಡಲು ಒತ್ತಿ).

ಚುನಾವಣಾ ಆಯೋಗದ ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಚುನಾವಣಾ ಪರ್ವ ದೇಶದ ಗರ್ವ ಎಂಬ ಘೋಷವಾಕ್ಯದೊಂದಿಗೆ ಈ ಜಾಗೃತಿ ವೀಡಿಯೋ ಸಿದ್ಧಪಡಿಸಿದೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗದ ಮಹಿಳೆಯರು ತಮ್ಮ ವಿಶಿಷ್ಠ ನೃತ್ಯ ಪ್ರಕಾರವಾದ ಡಮಾಮಿ ನೃತ್ಯದ ಮೂಲಕ ಮತ್ತು ಸಂಗೀತದ ಮೂಲಕ ಮತದಾನದ ಮಹತ್ವ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ. ವೀಡಿಯೋ ದೃಶ್ಯದಲ್ಲಿ ಸಿದ್ದಿ ಸಮುದಾಯದ ಮಹಿಳೆಯರು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳು ಮತ್ತು ಡಮಾಮಿ ವಾದ್ಯದ ಮೂಲಕ ಲಯಬದ್ದವಾಗಿ ಮತದಾನ ಜಾಗೃತಿ ಬಗ್ಗೆ ಹಾಡುವುದರ ಮೂಲಕ ಜಿಲ್ಲೆಯ ವಿಶಿಷ್ಠ ಕಲೆಯನ್ನು ರಾಜ್ಯಾದ್ಯಂತ ಸಾರಿದ್ದಾರೆ.

ಇದನ್ನೂ ಓದಿ : ಮಹಾಬಲೇಶ್ವರ ಶೆಟ್ಟಿ ಅವರಿಗೆ ನುಡಿ ನಮನ

ಚುನಾವಣಾ ಆಯೋಗದ ಈ ಮತದಾನ ಜಾಗೃತಿ ಕುರಿತಂತೆ ಸಿದ್ದಪಡಿಸಿರುವ ವೀಡಿಯೋವನ್ನು ಸಿದ್ದಿ ಸಮುದಾಯದವರು ವಾಸಿಸುವ ಹಳಿಯಾಳ ತಾಲೂಕಿನ ಸಾಂಬ್ರಾಣಿ ಗ್ರಾಮದಲ್ಲಿ ಚಿತ್ರೀಕರಿಸಲಾಗಿದೆ. ಜೂಲಿಯಾನ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ೨೦ ಕ್ಕೂ ಅಧಿಕ ಮಹಿಳೆಯರು ಡಮಾಮಿ ನೃತ್ಯದಲ್ಲಿ ಭಾಗವಹಿಸಿದ್ದಾರೆ. ಸಿದ್ದಿ ಜನಾಂಗದ ಆಡು ಭಾಷೆಯಲ್ಲಿ ಚುನಾವಣಾ ಜಾಗೃತಿಯ ಸಂದೇಶ ಸಾರಿದ್ದಾರೆ.

ಇದನ್ಮೂ ಓದಿ : ಆಕಳ ಕರುವನ್ನು ರಕ್ಷಿಸಿದ ಹಿಂದೂ ಕಾರ್ಯಕರ್ತರು

ಅಲ್ಲದೇ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗುವ ಮೂಲಕ ಜಿಲ್ಲೆಗೆ ಗೌರವವನ್ನು ಇಮ್ಮಡಿಗೊಳಿಸಿರುವ ವೃಕ್ಷಮಾತೆ ಎಂದೇ ಹೆಸರಾದ ತುಳಸಿ ಗೌಡ ಅವರು ಕೂಡ ವೀಡಿಯೋದಲ್ಲಿ ರಾಷ್ಟ್ರಧ್ವಜ ಹಿಡಿದು ಮತದಾನದ ಸಂದೇಶ ನೀಡಿದ್ದಾರೆ.

ಈ ರೀಲ್ಸ್ ನೋಡಿ : ಪಕ್ಷದೊಳಗಿನ ಭಿನ್ನಮತದ ಬಗ್ಗೆ ಬಿಜೆಪಿ ಅಭ್ಯರ್ಥಿ ಕಾಗೇರಿ ಹೇಳಿದ್ದೇನು?

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಯಾಣದ ಸುಂದರ ದೃಶ್ಯಗಳನ್ನು ವಿಡಿಯೋದಲ್ಲಿ ಅಳವಡಿಸಲಾಗಿದೆ. ಯಾಣದಲ್ಲಿ ಯುವಕರೊಬ್ಬರು ಮತದಾನ ಮಾಡುವ ಸಂಕೇತ ವಿಡಿಯೋದಲ್ಲಿದೆ.

ಸುಮಾರು ಎರಡು ತಿಂಗಳ ಹಿಂದೆ ನಡೆದ ಈ ವೀಡಿಯೋ ಚಿತ್ರೀಕರಣದಲ್ಲಿ ನಮ್ಮ ಸಮುದಾಯದ ೨೦ ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದೆವು. ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಸಮುದಾಯದ ಜಾನಪದ ಕಲೆ ಸಂಸ್ಕೃತಿಯನ್ನು ರಾಜ್ಯ ಚುನಾವಣಾ ಆಯೋಗ ಬಳಸಿಕೊಂಡಿರುವುದು ನಮಗೆ ಹೆಮ್ಮೆಯ ವಿಷಯ. ಈ ಮೂಲಕ ರಾಜ್ಯಾದ್ಯಂತ ನಮ್ಮ ವೈಶಿಷ್ಟ್ಯಪೂರ್ಣ ಸಂಸ್ಕೃತಿಯ ಬಗ್ಗೆ ಜನತೆಗೆ ತಿಳಿಯುವಂತಾಗಿದೆ. ನಮಗೆ ತುಂಬಾ ಸಂತೋಷವಾಗಿದೆ.
ಜೂಲಿಯಾನ ಫೆರ್ನಾಂಡಿಸ್, ಡಮಾಮಿ ನೃತ್ಯ ತಂಡದ ನಾಯಕಿ.