ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಲೋಕಸಭಾ ಸಾರ್ವತ್ರಿಕ ಚುನಾವಣೆಯಂದು ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಅಗತ್ಯ ವಸ್ತುಗಳ ಕಿಟ್ ಪೂರೈಸಲಾಗುತ್ತದೆ.
ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮತಗಟ್ಟೆ ಸಿಬ್ಬಂದಿಗೆ ತಮ್ಮ ಮನೆ ತೊರೆದು ಶಾಲೆಗಳಲ್ಲಿರುವ ಮತಗಟ್ಟೆಗಳಲ್ಲಿ ತಂಗುವ ಸಮಯದಲ್ಲಿ ದೈನಂದಿನ ಬಳಕೆಗೆ ಬಳಸುವ ಅಗತ್ಯ ವಸ್ತುಗಳ ಯಾವುದೇ ಕೊರೆತೆಯಾಗದಿರಲೆಂದು ವಿಶೇಷ ಕಿಟ್‌ನ್ನು ಜಿಲ್ಲಾಡಳಿತ ಸಿದ್ದಪಡಿಸುತ್ತಿದೆ.

ಇದನ್ನೂ ಓದಿ : ಯುಗಾದಿ, ರಮಜಾನ್ ಪ್ರಯುಕ್ತ ಹೆಚ್ಚುವರಿ ಬಸ್ ಸಂಚಾರ

ಮತದಾನದ ದಿನಕ್ಕೂ ಒಂದು ದಿನ ದಿನ ಮುಂಚೆ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಪರಿಕರಗಳೊಂದಿಗೆ ಸಿಬ್ಬಂದಿ ಮತಗಟ್ಟೆಗೆ ತೆರಳುತ್ತಾರೆ. ಮರುದಿನ ಬೆಳಗ್ಗೆ ತಮ್ಮ ದೈನಂದಿನ ಸಿದ್ದತೆಗಳಿಗೆ ತೊಂದರೆಯಾಗದಂತೆ ವಿಶೇಷ ಕಿಟ್ ನೀಡಲಾಗುತ್ತದೆ. ಎಲ್ಲಾ ಸಿಬ್ಬಂದಿಗೆ ಪ್ರತ್ಯೇಕವಾಗಿ ಸಿದ್ಧಪಡಿಸಿದ ಕಿಟ್ ನಲ್ಲಿ ಟೂತ್ ಪೇಸ್ಟ್, ಹಲ್ಲುಜ್ಜುವ ಬ್ರಷ್, ಸ್ನಾನ ಮಾಡಲು ಸೋಪು, ಬಾಚಣಿಗೆ ಮುಂತಾದ ಅತ್ಯಗತ್ಯ ವಸ್ತುಗಳ ಕಿಟ್‌ ಒದಗಿಸಲಾಗುತ್ತದೆ. ಆ ಮೂಲಕ, ಸಿಬ್ಬಂದಿ ಅತ್ಯಂತ ಉತ್ಸಾಹದಿಂದ ಮತದಾನದ ಕರ್ತವ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುತ್ತಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್  ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕಿಟ್ ಮಾತ್ರವಲ್ಲದೆ ಸಿಬ್ಬಂದಿ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸುತ್ತಿರುವ ಜಿಲ್ಲಾಡಳಿತ ಮತಗಟ್ಟೆಗೆ ತೆರಳುವ ಎಲ್ಲಾ ಸಿಬ್ಬಂದಿಗೆ ಶುದ್ಧ ಕುಡಿಯವ ನೀರಿನ ವ್ಯವಸ್ಥೆ ಒದಗಿಸಲಿದೆ. ಸಿಬ್ಬಂದಿಗಾಗಿಯೇ 30 ಲೀ. ನ ಶುದ್ಧ ನೀರಿನ ಕ್ಯಾನ್ ಪ್ರತಿಯೊಂದು ಮತಗಟ್ಟೆಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತಗಟ್ಟೆಯಲ್ಲಿ ತಂಗುವ ಸಿಬ್ಬಂದಿಗೆ ಯಾವುದೇ ಕೊರತೆಯಾಗದಂತೆ ಶಾಲೆಯಲ್ಲಿರುವ ಶೌಚಾಲಯಗಳಲ್ಲಿ ಸ್ವಚ್ಛತೆ ಮತ್ತು ಸಮರ್ಪಕ ನೀರಿನ ಸೌಲಭ್ಯ ಇರುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಸಿಬ್ಬಂದಿಗೆ ಕಾಲಕಾಲಕ್ಕೆ ಶುದ್ದ ಮತ್ತು ರುಚಿಕರ ಆಹಾರ ಒದಗಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಶಾಲೆಗಳಲ್ಲಿನ ಬಿಸಿಯೂಟ ತಯಾರಕರ ಮೂಲಕ ಆಹಾರ ಸಿದ್ಧಪಡಿಸಿ, ಸರಬರಾಜು ಮಾಡಲು ವ್ಯವಸ್ಥೆಗಳನ್ನು ಕೈಗೊಂಡಿದೆ. ಸಿಬ್ಬಂದಿಗೆ ವೈವಿಧ್ಯಮಯವಾದ ರುಚಿಕರ ಊಟ ಮತ್ತು ಉಪಹಾರ ನೀಡುವ ಸಲುವಾಗಿ ಜಿಲ್ಲಾಧಿಕಾರಿಗಳೇ ವಿಶೇಷ ಮುತುವರ್ಜಿ ವಹಿಸಿದ್ದು, ಎಲ್ಲಾ ಸಿಬ್ಬಂದಿ ಮೆಚ್ಚುವಂತೆ ತಾವೇ ಪ್ರತ್ಯೇಕ ಮೆನು ನೀಡುವುದಾಗಿ ತಿಳಿಸಿದ್ದಾರೆ. ಆಹಾರ ತಯಾರಿಕೆಯ ಬೇಕಾದ ಗುಣಮಟ್ಟದ ಪದಾರ್ಥಗಳನ್ನು ಹೊರಗಿನಿಂದಲೇ ಖರೀದಿಸಿ ನೀಡಲಾಗುತ್ತದೆ. ಇದಕ್ಕಾಗಿ ಬಿಸಿಯೂಟ ಯೋಜನೆಯ ಪದಾರ್ಥಗಳನ್ನು ಬಳಸಿಕೊಳ್ಳದೇ ಇರಲು ನಿರ್ಧರಿಸಲಾಗಿದೆ. ಸಿಬ್ಬಂದಿಗೆ ಮೊದಲ ದಿನ ಮಧ್ಯಾಹ್ನ ಮತ್ತು ರಾತ್ರಿಯ ಭೋಜನ, ಮರುದಿನ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ.

ಮಹಿಳಾ ಮತಗಟ್ಟೆ ಅಧಿಕಾರಿಗಳು ಹೆಚ್ಚಿರುವ ಕಡೆಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜಿಸಲು ಯೋಜನೆ ರೂಪಿಸಿದೆ. ಮಹಿಳಾ ಸಿಬ್ಬಂದಿ ಅತ್ಯಂತ ಅನಿವಾರ್ಯ ಕಾರಣಗಳಿಂದ ಮತಗಟ್ಟೆಗಳಲ್ಲಿ ತಂಗಲು ಸಾಧ್ಯವಾಗದೆ ಇದ್ದಲ್ಲಿ , ಮರುದಿನ ಬೆಳಗ್ಗೆ ಅಣಕು ಮತದಾನ ನಡೆಯುವುದಕ್ಕಿಂತ ಮುಂಚೆ ಮತಗಟ್ಟೆಯಲ್ಲಿನ ತಮ್ಮ ಕರ್ತವ್ಯಕ್ಕೆ ಹಾಜರಾಗುವ ಷರತ್ತಿಗೆ ಒಳಪಟ್ಟು ವಿಶೇಷ ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಒಟ್ಟಿನಲ್ಲಿ ಚುನಾವಣಾ ಕರ್ತವ್ಯ ಎಂದರೆ ಆಲಸ್ಯ ತೋರುವ ಸಿಬ್ಬಂದಿ ಅತ್ಯಂತ ಉತ್ಸಾಹದಿಂದ ಚುನಾವಣಾ ಕರ್ತವ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಲು ಜಿಲ್ಲಾಡಳಿತ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.

ಗಂಗೂಬಾಯಿ ಮಾನಕರ್

ಚುನಾವಣೆಯಲ್ಲಿ ಮತದಾನ ದಿನವು ಅತ್ಯಂತ ಪ್ರಮುಖವಾದುದು. ಮತದಾನ ಕಾರ್ಯವು ಸುಗಮವಾಗಿ ನಡೆಯಲು ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಪಾತ್ರ ಅತ್ಯಂತ ಮಹತ್ವವಾದುದು. ಸಿಬ್ಬಂದಿ ತಮ್ಮ ಕರ್ತವ್ಯಗಳನ್ನು ಹೆಚ್ಚಿನ ಉತ್ಸಾಹದಿಂದ ನಿರ್ವಹಿಸಲು ಅವರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರತಿಯೊಂದು ಮತಗಟ್ಟೆ ಸಿಬ್ಬಂದಿ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದೆ.
ಗಂಗೂಬಾಯಿ ಮಾನಕರ, ಜಿಲ್ಲಾ ಚುನಾವಣಾಧಿಕಾರಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರ.