ಭಟ್ಕಳ ಡೈರಿ ವರದಿ

ಭಟ್ಕಳ: ನಗರದ ಸೋನಾರಕೇರಿಯ ಮಹಾಲೆ ಸಮಾಜದ ಶ್ರೀ ಮಹಾಗಣಪತಿ ಶ್ರೀ ಮಂಡಲೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ಸಂಪ್ರದಾಯಬದ್ಧವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಘಟಸ್ಥಾಪನೆಯೊಂದಿಗೆ ಆರಂಭಗೊಂಡ ಉತ್ಸವದಲ್ಲಿ ಸಮಾಜದ ಬಾಂಧವರು ಒಗ್ಗೂಡಿ ದೇವಿಯ ಆರಾಧನೆ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸಂಪ್ರದಾಯಬದ್ಧ ಘಟಸ್ಥಾಪನೆ: ಹಲವು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ನವರಾತ್ರಿಯ ಮೊದಲ ದಿನ ದೇವರ ಮನೆಯಲ್ಲಿ ಕಳಶ ಸ್ಥಾಪಿಸಿ, ಅದಕ್ಕೆ ಪವಿತ್ರ ದಾರವನ್ನು ಸುತ್ತಿ ದೇವಿಯನ್ನು ಆಹ್ವಾನಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಹರಕೆಯ ರೂಪದಲ್ಲಿ ಸಮರ್ಪಿಸಲಾದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ಸಮಾಜದ ಬಾಂಧವರ ಕೊಡುಗೆಯಿಂದ ರೂಪಿಸಲಾದ ಬೆಳ್ಳಿಯ ಕಿರೀಟ ಸಹಿತ ಮುಖವಾಡ ದೇವಿಯ ಅಲಂಕಾರಕ್ಕೆ ವಿಶೇಷ ಮೆರುಗು ನೀಡಿದೆ. ಸೊಂಟದ ಪಟ್ಟಿ, ಕೈಗಳ ಅಲಂಕಾರ ಹಾಗೂ ಚಿನ್ನಾಭರಣಗಳು ದೇವಿಯ ಕಳೆಯನ್ನು ಹೆಚ್ಚಿಸಿವೆ.

ನವರಾತ್ರಿಯ ಒಂಭತ್ತು ದಿನಗಳ ಕಾಲ ಪ್ರತಿದಿನ ವಿಶೇಷ ಪೂಜೆ ನೆರವೇರುತ್ತದೆ. ಪ್ರತಿದಿನ ಒಂದೊಂದು ಮನೆಯವರು ಪೂಜೆಯ ಜವಾಬ್ದಾರಿ ವಹಿಸಿಕೊಂಡು ಆರಾಧನೆ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮವೂ ನಡೆಯುತ್ತದೆ. ವಿವಿಧ ಊರುಗಳಲ್ಲಿ ನೆಲೆಸಿರುವ ಮಹಾಲೆ ಸಮಾಜದ ಬಾಂಧವರೂ ನವರಾತ್ರಿಯ ಸಂದರ್ಭದಲ್ಲಿ ಆಗಮಿಸಿ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆಯುತ್ತಾರೆ.

ಹೊಸತು ಆಚರಣೆ: ಭತ್ತದ ಕದಿರಿಗೆ ಪೂಜೆ: ನವರಾತ್ರಿ ಸಂದರ್ಭದಲ್ಲಿ ಆಚರಿಸಲಾಗುವ ಹೊಸತು ಸಂಪ್ರದಾಯಕ್ಕೂ ವಿಶೇಷ ಮಹತ್ವವಿದೆ. ಅದರಂತೆ ಕಳೆದ ಸೋಮವಾರ ಭತ್ತದ ಗದ್ದೆಯಿಂದ ತಂದ ಕದಿರನ್ನು ಪೂಜಿಸಿ, ಬಳಿಕ ಪ್ರತಿ ಮನೆಯಲ್ಲೂ ಕದಿರನ್ನು ಕಟ್ಟುವ ಮೂಲಕ ಹೊಸತು ಆಚರಣೆ ನೆರವೇರಿಸಲಾಯಿತು.

ಗಮನ ಸೆಳೆದ ಕನ್ಯಾಪೂಜೆ:

ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಕನ್ಯಾಪೂಜೆಯೂ ಒಂದಾಗಿದೆ. ಪ್ರತಿವರ್ಷದ ಸಂಪ್ರದಾಯದಂತೆ ಈ ಬಾರಿಯೂ ಹತ್ತು ವರ್ಷದೊಳಗಿನ ಹೆಣ್ಣುಮಕ್ಕಳನ್ನು ದೇವಿಯ ಸ್ವರೂಪವೆಂದು ಭಾವಿಸಿ ಪೂಜಿಸಲಾಯಿತು. ಬಾಲಕಿಯರ ಪಾದಗಳನ್ನು ನೀರಿನಿಂದ ತೊಳೆದು, ಅರಿಶಿನ-ಕುಂಕುಮ ಹಚ್ಚಿ, ಅಕ್ಷತೆ ಹಾಕಿ ಆರತಿ ಬೆಳಗಿ ಕಾಣಿಕೆ ಸಮರ್ಪಿಸಲಾಯಿತು. ಕೊನೆಯಲ್ಲಿ ಬಾಲಕಿಯರ ಪಾದಗಳಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುವ ಮೂಲಕ ಕನ್ಯಾಪೂಜೆಯನ್ನು ಶ್ರದ್ಧೆಯಿಂದ ನೆರವೇರಿಸಲಾಯಿತು.

ಅನ್ನಸಂತರ್ಪಣೆ, ನಕ್ತ ವ್ರತಾಚರಣೆ: ನವರಾತ್ರಿ ಉತ್ಸವದ ಅಂಗವಾಗಿ ಮೂರು ದಿನ ಅನ್ನಸಂತರ್ಪಣೆ ಆಯೋಜಿಸಲಾಗುತ್ತದೆ. ಹೊಸತು, ಮಹಾನವಮಿ ಹಾಗೂ ನಿಗದಿತ ಶುಕ್ರವಾರ ಅಥವಾ ಸೋಮವಾರದಂದು ಅನ್ನಸಂತರ್ಪಣೆ ನಡೆಯುತ್ತದೆ. ಸಮಾಜದ ಬಾಂಧವರು ನಕ್ತ ವ್ರತದ ಸಂಪ್ರದಾಯವನ್ನು ಪಾಲಿಸುತ್ತಾರೆ. ಅದರಂತೆ ಹಗಲಿನಲ್ಲಿ ಉಪವಾಸವಿದ್ದು, ರಾತ್ರಿ ಪೂಜೆಯ ಬಳಿಕ ವ್ರತದ ನಿಯಮಗಳಿಗೆ ಅನುಗುಣವಾಗಿ ಆಹಾರ ಸೇವಿಸುತ್ತಾರೆ. ಮುಂದಿನ ಶುಕ್ರವಾರ ಹಾಗೂ ಮಹಾನವಮಿಯಂದು ಇನ್ನೆರಡು ನಕ್ತ ವ್ರತಾಚರಣೆ ನಡೆಯಲಿದೆ. ಅರ್ಚಕರು, ಸಹಾಯಕರು ಇನ್ನೂ ಕೆಲವರು ಪ್ರತಿದಿನವೂ ನಕ್ತ ಆಚರಣೆ ಮಾಡುತ್ತಾರೆ.

ದಶಮಿಯಂದು ಪವಿತ್ರ ದಾರದ ವಿತರಣೆ: ನವರಾತ್ರಿಯ ಸಮಾರೋಪದ ಅಂಗವಾಗಿ ದಶಮಿಯಂದು ವಿಸರ್ಜನೆ ನೆರವೇರಿಸಿದ ಬಳಿಕ ಘಟಸ್ಥಾಪನೆಗೆ ಬಳಸಿದ ಪವಿತ್ರ ದಾರವನ್ನು ಸಮಾಜದ ಪ್ರತಿ ಮನೆಗೂ ವಿತರಿಸಲಾಗುತ್ತದೆ. ಸಮಾಜದ ಬಾಂಧವರು ಆ ದಾರವನ್ನು ಕೈಗೆ ಕಟ್ಟಿಕೊಂಡು ಸಂಪ್ರದಾಯವನ್ನು ಮುಂದುವರಿಸುತ್ತಾರೆ.

ಮಹಾಲೆ ಸಮಾಜದ ಧಾರ್ಮಿಕ ಪರಂಪರೆ, ಸಾಮೂಹಿಕ ಭಾಗವಹಿಸುವಿಕೆ ಹಾಗೂ ತಲೆಮಾರುಗಳಿಂದ ನಡೆದುಕೊಂಡು ಬಂದ ಆಚರಣೆಗಳನ್ನು ಉಳಿಸಿ ಬೆಳೆಸುವಲ್ಲಿ ನವರಾತ್ರಿ ಉತ್ಸವ ಮಹತ್ವದ ಪಾತ್ರ ವಹಿಸಿದೆ.

ಇದನ್ನೂ ಓದಿ:

ಭಟ್ಕಳದ ಮಹಾಲೆಮನೆ ಗಣೇಶೋತ್ಸವ ಸಂಪನ್ನ: ೧೧ ದಿನಗಳ ಸಂಭ್ರಮಕ್ಕೆ ತೆರೆ

ಗ್ರಾಮೀಣ ಜನರ ಸಬಲೀಕರಣವೇ ವಿಕಸಿತ ಭಾರತದ ನಿಜವಾದ ಅಡಿಪಾಯ: ರಾಜೇಶ ಮಹಾಲೆ