ಭಟ್ಕಳ ಡೈರಿ ವರದಿ
ಭಟ್ಕಳ: ಜಮೀನಿನ ಸರ್ವೇ ಸಂದರ್ಭದಲ್ಲಿ ಉಂಟಾದ ವಿವಾದ ಹಲ್ಲೆ ಆರೋಪಕ್ಕೆ ತಿರುಗಿದ್ದು, ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಿಸಿದ್ದಾರೆ.
ಭಟ್ಕಳ ತಾಲೂಕಿನ ಯಲ್ವಡಿಕವೂರು ಗ್ರಾಮದ ಮಾಮಿತ್ತು ಪ್ರದೇಶದಲ್ಲಿರುವ ಸರ್ವೇ ನಂ. ೯೧ರ ಹಿಸ್ಸಾ ೧ರ ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ವಿವಾದವಿತ್ತು ಎನ್ನಲಾಗಿದೆ. ಜಮೀನನ್ನು ಜಂಟಿಯಾಗಿ ಖರೀದಿಸಿರುವುದರಿಂದ ಸಮಪಾಲು ಮಾಡಬೇಕು ಹಾಗೂ ತಮ್ಮ ಪಾಲಿನ ಜಾಗ ಒತ್ತುವರಿಯಾಗಿದೆ ಎಂದು ರವಿ ರಾಮಚಂದ್ರ ನಾಯ್ಕ (೩೧) ಅವರು ಸರ್ವೇ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ವೇಳೆ ಎರಡು ಕಡೆಯವರ ನಡುವೆ ವಾಗ್ವಾದ ಉಂಟಾಗಿ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಮಂಜುನಾಥ ನಾಯ್ಕರಿಂದ ಹಲ್ಲೆ ಆರೋಪ: ಮಾಮಿತ್ತು ನಿವಾಸಿ ಮಂಜುನಾಥ ನಾರಾಯಣ ನಾಯ್ಕ (೩೮) ನೀಡಿದ ದೂರಿನ ಪ್ರಕಾರ, ವಾಗ್ವಾದದ ವೇಳೆ ರವಿ ರಾಮಚಂದ್ರ ನಾಯ್ಕ ಅವರು ತಮ್ಮನ್ನು ತಳ್ಳಿ ಕತ್ತಿಯಿಂದ ತಲೆಗೆ ಹೊಡೆದಿದ್ದಾರೆ. ಬಳಿಕ ರವಿ ಹಾಗೂ ರಾಮಚಂದ್ರ ನಾಯ್ಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಜಗಳ ಬಿಡಿಸಲು ಬಂದ ತಮ್ಮ ಪತ್ನಿ ಬೇಬಿ ನಾಯ್ಕ ಅವರ ಮೇಲೆ ನಾಗಮ್ಮ, ಗಿರಿಜಾ ಸೇರಿದಂತೆ ಮೂವರು ಹಲ್ಲೆ ನಡೆಸಿದ್ದಾರೆ. ತಮ್ಮ ಸಹೋದರ ಹನುಮಂತ ನಾಯ್ಕ ಅವರ ಮೇಲೂ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯಲ್ಲಿ ಮಂಜುನಾಥ, ಬೇಬಿ ಹಾಗೂ ಹನುಮಂತ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ರವಿ ನಾಯ್ಕರಿಂದ ಪ್ರತಿದೂರು: ಇದಕ್ಕೆ ಪ್ರತಿಯಾಗಿ ರವಿ ರಾಮಚಂದ್ರ ನಾಯ್ಕ ಅವರು ದೂರು ದಾಖಲಿಸಿದ್ದು, ತಮ್ಮ ತಂದೆ ರಾಮಚಂದ್ರ ನಾಯ್ಕ (೬೦) ಅವರನ್ನು ಮಂಜುನಾಥ ನಾಯ್ಕ ಕೆಳಕ್ಕೆ ಬೀಳಿಸಿ ಕಾಲಿನಿಂದ ಒದ್ದಿದ್ದಾರೆ. ಹನುಮಂತ ನಾಯ್ಕ ಕೂಡ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಜಗಳ ಬಿಡಿಸಲು ಬಂದ ತಮ್ಮ ತಾಯಿ ನಾಗಮ್ಮ ನಾಯ್ಕ (೫೦) ಅವರ ಮೇಲೆ ಬೇಬಿ ಹಾಗೂ ಸುಮಿತ್ರಾ ಹಲ್ಲೆ ನಡೆಸಿ ಕೆಳಕ್ಕೆ ತಳ್ಳಿದ್ದಾರೆ. ಇದರಿಂದ ನಾಗಮ್ಮ ಅವರ ಬಲಕೈಗೆ ಗಾಯವಾಗಿದ್ದು, ಆರೋಪಿಗಳು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಪ್ರತಿದೂರಿನಲ್ಲಿ ತಿಳಿಸಿದ್ದಾರೆ.
ಜಮೀನಿನ ಸರ್ವೇ ಸಂದರ್ಭದಲ್ಲಿ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ಪರಸ್ಪರ ಹಲ್ಲೆಯ ಆರೋಪ ಮಾಡಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸರು ದೂರು ಹಾಗೂ ಪ್ರತಿದೂರಿನ ಆಧಾರದಲ್ಲಿ ತನಿಖೆ ಕೈಗೊಂಡಿದ್ದಾರೆ. ಘಟನೆಯ ನೈಜ ಸಂಗತಿಗಳು ಹಾಗೂ ಎರಡೂ ಕಡೆಯವರ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ಇದನ್ನೂ ಓದಿ:
ಮಾವಿನಕಟ್ಟೆಯಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ: ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
ಶಿರಾಲಿ ಚೆಕ್‌ಪೋಸ್ಟ್ ಬಳಿ ಮೋಟಾರ್ ಸೈಕಲ್‌ಗೆ ಇನ್ಸುಲೇಟರ್ ವಾಹನ ಡಿಕ್ಕಿ: ಅಂಗನವಾಡಿ ಶಿಕ್ಷಕಿಗೆ ಗಾಯ




