ಭಟ್ಕಳ ಡೈರಿ ವರದಿ
ಭಟ್ಕಳ: ಜಾಗದ ಸರ್ವೇ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಉಂಟಾದ ವಿವಾದ ಹಲ್ಲೆ ಆರೋಪಗಳವರೆಗೆ ತಲುಪಿದ್ದು, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರು ಪ್ರತ್ಯೇಕ ದೂರು ನೀಡಿದ್ದಾರೆ. ಯಲ್ವಡಿಕವೂರು ಗ್ರಾಮದ ಮಾಮಿತ್ಲು ಪ್ರದೇಶದಲ್ಲಿ ಈ ಘಟನೆ ನಡೆದಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಸರ್ವೇ ವೇಳೆ ಕತ್ತಿಯಿಂದ ಹಲ್ಲೆ ಆರೋಪ: ಮಂಜುನಾಥ ನಾಯ್ಕ (೩೮) ಅವರು ನೀಡಿದ ದೂರಿನ ಪ್ರಕಾರ, ಅವರ ಕುಟುಂಬ ಮತ್ತು ರವಿ ನಾಯ್ಕ ಅವರ ಕುಟುಂಬದ ನಡುವೆ ಜಾಗದ ಸಂಬಂಧ ವಿವಾದವಿತ್ತು. ಮಂಜುನಾಥ ಅವರ ಅಣ್ಣ ಹನುಮಂತ ನಾಯ್ಕ ಜಾಗದ ಸರ್ವೇಗೆ ಅರ್ಜಿ ಸಲ್ಲಿಸಿದ್ದರು. ಸರ್ವೇ ನಡೆಯುತ್ತಿದ್ದ ವೇಳೆ ರವಿ ನಾಯ್ಕ ಅವಾಚ್ಯವಾಗಿ ಬೈದು, ಮಂಜುನಾಥ ಅವರನ್ನು ದೂಡಿ ಕತ್ತಿಯಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ. ನಂತರ ರವಿ ನಾಯ್ಕ ಮತ್ತು ರಾಮಚಂದ್ರ ನಾಯ್ಕ ಸೇರಿ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ಹಲ್ಲೆ ತಡೆಯಲು ಬಂದ ಮಂಜುನಾಥ ಅವರ ಪತ್ನಿ ಬೇಬಿ ನಾಯ್ಕ ಅವರ ಮೇಲೂ ರವಿ ನಾಯ್ಕ, ನಾಗಮ್ಮ ಮತ್ತು ಗಿರಿಜಾ ನಾಯ್ಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. ಅಲ್ಲದೆ, ಹನುಮಂತ ನಾಯ್ಕ ಅವರ ಮೇಲೂ ರವಿ ಮತ್ತು ರಾಮಚಂದ್ರ ನಾಯ್ಕ ಹಲ್ಲೆ ನಡೆಸಿದ್ದಾರೆ ಎಂದು ಮಂಜುನಾಥ ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಂದು ದೂರು: ಇದೇ ವಿವಾದಕ್ಕೆ ಸಂಬಂಧಿಸಿದಂತೆ ರವಿ ನಾಯ್ಕ (೩೧) ಅವರು ಮಂಜುನಾಥ ನಾಯ್ಕ, ಹನುಮಂತ ನಾಯ್ಕ, ಬೇಬಿ ನಾಯ್ಕ ಮತ್ತು ಸುಮಿತ್ರಾ ನಾಯ್ಕ ವಿರುದ್ಧ ಪ್ರತ್ಯೇಕ ದೂರು ನೀಡಿದ್ದಾರೆ. ರವಿ ನಾಯ್ಕ ಅವರ ದೂರಿನ ಪ್ರಕಾರ, ಎರಡೂ ಕುಟುಂಬಗಳ ನಡುವೆ ಜಾಗದ ಪಾಲು ಹಂಚಿಕೆ ವಿಚಾರವಾಗಿ ವಿವಾದವಿತ್ತು. ಜಾಗದ ಸರ್ವೇಗೆ ಇಬ್ಬರು ಬಂದಿದ್ದ ಸಂದರ್ಭದಲ್ಲಿ, ತಾವು ಮತ್ತು ತಮ್ಮ ತಂದೆ ರಾಮಚಂದ್ರ ನಾಯ್ಕ ಅವರು ಜಾಗವನ್ನು ಒಟ್ಟಿಗೆ ಖರೀದಿಸಿದ್ದು, ತಲಾ ೧೬ ಗುಂಟೆಯಂತೆ ಸಮಪಾಲು ಆಗಬೇಕು ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಈ ವೇಳೆ ಮಂಜುನಾಥ ನಾಯ್ಕ ತಮ್ಮ ತಂದೆಯನ್ನು ಅಡ್ಡಗಟ್ಟಿ ಕೆಳಗೆ ಬೀಳಿಸಿ ಕಾಲಿನಿಂದ ಒದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಹನುಮಂತ ನಾಯ್ಕ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂಬುದೂ ದೂರಿನಲ್ಲಿದೆ.
ಹಲ್ಲೆ ತಡೆಯಲು ಬಂದ ತಮ್ಮ ತಾಯಿ ನಾಗಮ್ಮ ನಾಯ್ಕ ಅವರ ಮೇಲೆ ಬೇಬಿ ನಾಯ್ಕ ಮತ್ತು ಸುಮಿತ್ರಾ ನಾಯ್ಕ ಹಲ್ಲೆ ನಡೆಸಿ ಕೆಳಗೆ ದೂಡಿದ್ದಾರೆ. ಇದರಿಂದ ಅವರ ಬಲಗೈಗೆ ಗಾಯವಾಗಿದ್ದು, ಅವಾಚ್ಯವಾಗಿ ಬೈದಿದ್ದಾರೆ ಎಂದು ರವಿ ನಾಯ್ಕ ದೂರಿನಲ್ಲಿ ಆರೋಪಿಸಿದ್ದಾರೆ. ಜಾಗದ ಸರ್ವೇ ಮತ್ತು ಪಾಲು ಹಂಚಿಕೆ ವಿಚಾರವಾಗಿ ಎರಡೂ ಕಡೆಯವರು ಪರಸ್ಪರ ಹಲ್ಲೆಯ ಆರೋಪ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.
ಇದನ್ನೂ ಓದಿ:
ಬೆಂಗ್ರೆಯ ಗೊಂಚಿಹಿತ್ಲಿನಲ್ಲಿ ಬೈಕ್ ಡಿಕ್ಕಿ: ನಾಲ್ಕು ವರ್ಷದ ಬಾಲಕನ ಕಾಲಿನ ಮೂಳೆ ಮುರಿತ
ಭಟ್ಕಳ ಅಂಜುಮನ್ ಕಾಲೇಜಿಗೆ ಮೂರು ವಿಶ್ವವಿದ್ಯಾಲಯ ರ್ಯಾಂಕ್




