ಭಟ್ಕಳ ಡೈರಿ ವರದಿ
ಭಟ್ಕಳ: ಮದ್ಯಪಾನ ಮಾಡುತ್ತಿದ್ದ ವೇಳೆ ನಡೆದ ಗಲಾಟೆಯನ್ನು ಬಿಡಿಸಲು ಮುಂದಾದವರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.
ಪೊಲೀಸ್ ದೂರಿನ ಪ್ರಕಾರ, ಹೆಬಳೆಯ ಗಾಂಧಿನಗರ ನಿವಾಸಿ ಗೌತಮ್ ಧರ್ಮವಿಜಯ ಮೊಗೇರ (೨೪) ಈ ಪ್ರಕರಣದ ದೂರುದಾರರಾಗಿದ್ದಾರೆ. ಮೀನುಗಾರಿಕೆ ವೃತ್ತಿಯಲ್ಲಿರುವ ಅವರು, ಮದ್ಯಪಾನ ಮಾಡುತ್ತಿದ್ದವರ ನಡುವಿನ ಜಗಳವನ್ನು ಬಿಡಿಸಲು ಮುಂದಾಗಿದ್ದರು ಎನ್ನಲಾಗಿದೆ.
ಈ ವೇಳೆ ಆರೋಪಿಗಳಾದ ಗುಳ್ಮಿಯ ಸೈಯ್ಯದ ಅಕ್ರಮ, ಹೆಬಳೆಯ ತಲಹಾ ಸ್ಟ್ರೀಟ್ನ ಸೈಯ್ಯದ ಮೂಸಾ ಹಾಗೂ ಹೆಬಳೆಯ ಮಾಸ್ಟರ್ ಕಾಲೋನಿಯ ಅಪ್ಸರ ಅಲಿ ಅಲಿಯಾಸ್ ಬಂಟ ಅವರು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೈಯಬೇಡಿ ಎಂದು ಎಚ್ಚರಿಸಿದಾಗ, ಆರೋಪಿಗಳು ಅಲ್ಲಿದ್ದ ಬಿಯರ್ ಬಾಟಲಿಗಳನ್ನು ತೆಗೆದುಕೊಂಡು ಬೆದರಿಕೆ ಹಾಕಿದ್ದಾರೆ. ಬಳಿಕ ಮೊದಲ ಮತ್ತು ಎರಡನೇ ಆರೋಪಿಗಳು ಬಾಟಲಿಗಳನ್ನು ಒಡೆದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮೊದಲ ಆರೋಪಿಯು ಒಡೆದ ಬಿಯರ್ ಬಾಟಲಿಯಿಂದ ಅಭಿಷೇಕ ನಾಯ್ಕ ಅವರ ಎಡ ಕುತ್ತಿಗೆಯ ಸಮೀಪ ಹಲ್ಲೆ ನಡೆಸಿದ್ದು, ಅವರಿಗೆ ಗಂಭೀರ ರಕ್ತಗಾಯವಾಗಿದೆ ಎನ್ನಲಾಗಿದೆ. ಎರಡನೇ ಆರೋಪಿಯು ಹೇಮಂತ ನಾಯ್ಕ ಅವರ ಬಲಗೈಗೆ ಬಾಟಲಿಯಿಂದ ಹೊಡೆದು ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನು, ಮೂರನೇ ಆರೋಪಿಯು ದೂರುದಾರ ಗೌತಮ್ ಅವರ ಹಣೆಯ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿ ನೋವುಂಟು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :
ಭಟ್ಕಳದಲ್ಲಿ ಜಾಗದ ವಿವಾದ: ಎರಡೂ ಕುಟುಂಬಗಳಿಂದ ಪರಸ್ಪರ ಹಲ್ಲೆ ಆರೋಪ, ದೂರು ದಾಖಲು
ಬೆಂಗ್ರೆಯ ಗೊಂಚಿಹಿತ್ಲಿನಲ್ಲಿ ಬೈಕ್ ಡಿಕ್ಕಿ: ನಾಲ್ಕು ವರ್ಷದ ಬಾಲಕನ ಕಾಲಿನ ಮೂಳೆ ಮುರಿತ




