ಭಟ್ಕಳ ಡೈರಿ ವರದಿ
ಭಟ್ಕಳ: ಕ್ಷೇತ್ರದಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಅಧಿಕಾರ ದುರುಪಯೋಗ, ದಬ್ಬಾಳಿಕೆ ನಡೆಯುತ್ತಿದ್ದು, ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಆರೋಪಿಸಿದ್ದಾರೆ. ಭಟ್ಕಳ ಬಿಜೆಪಿ ಮಂಡಲದ ವತಿಯಿಂದ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಮಂಕಾಳ ವೈದ್ಯ ಅವರ ಕಾರ್ಯವೈಖರಿ ಹಾಗೂ ಕ್ಷೇತ್ರದ ವಿವಿಧ ಸಮಸ್ಯೆಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮಾತನಾಡುವ ನೈತಿಕತೆ ಮಂಕಾಳ ವೈದ್ಯ ಅವರಿಗೆ ಇಲ್ಲ ಎಂದು ಟೀಕಿಸಿದ ಸುನೀಲ ನಾಯ್ಕ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಗೊಂಡ, ಮೊಗೇರ ಸಮಾಜದ ಭರವಸೆ ಇನ್ನೂ ಈಡೇರಿಲ್ಲ: ೨೦೨೩ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗೊಂಡ ಹಾಗೂ ಮೊಗೇರ ಸಮಾಜದವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಿಸುವ ಭರವಸೆ ನೀಡಲಾಗಿತ್ತು. ಆದರೆ, ಈವರೆಗೆ ಭರವಸೆ ಈಡೇರಿಲ್ಲ ಎಂದು ಸುನೀಲ ನಾಯ್ಕ ಆರೋಪಿಸಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಕೆ ಮತ್ತು ಬೊಮ್ಮನಕೇರಿ ಭಾಗದ ಮಹಿಳೆಯರು ದಯಾಮರಣಕ್ಕೆ ಅರ್ಜಿ ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎಂದರು.
ಪರಿಹಾರ ನಿಧಿ, ಗ್ರಾಮೀಣ ಬಸ್ ಸೇವೆ ಕುರಿತು ಟೀಕೆ: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಡವರಿಗೆ ನೆರವು ಒದಗಿಸುವ ವಿಚಾರದಲ್ಲಿಯೂ ಶಾಸಕರು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂದು ಆರೋಪಿಸಿದ ಅವರು, ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಹೇಳಿದರು. ಹಳೆಯ ಬಸ್ಗಳ ಮೇಲೆ ಪ್ರಯಾಣಿಸಿ ಪ್ರಚಾರ ಪಡೆಯುವುದೇ ಅಭಿವೃದ್ಧಿಯಲ್ಲ ಎಂದು ಟೀಕಿಸಿದ ಸುನೀಲ ನಾಯ್ಕ, ತಾವು ಶಾಸಕರಾಗಿದ್ದ ಅವಧಿಯಲ್ಲಿ ವಿವಿಧ ಗ್ರಾಮಗಳಿಗೆ ಬಸ್ ಸೇವೆ ಕಲ್ಪಿಸಿದ್ದರೂ, ಅವುಗಳನ್ನು ಸ್ಥಗಿತಗೊಳಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಇತಿಹಾಸ ನೆನಪಿಸಿಕೊಳ್ಳಲಿ: ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಪ್ರಜಾಪ್ರಭುತ್ವದ ಕುರಿತು ಮಾತನಾಡುವ ಮೊದಲು ೧೯೭೫ರಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ಕಾಂಗ್ರೆಸ್ ಸರ್ಕಾರದ ಇತಿಹಾಸವನ್ನು ನೆನಪಿಸಿಕೊಳ್ಳಬೇಕು. ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹಾಗೂ ಸುಪ್ರೀಂ ಕೋರ್ಟ್ನ ಉಲ್ಲೇಖಗಳಿವೆ ಎಂದು ತಿಳಿಸಿದರು.
ಉಪಸಭಾಪತಿ ಹುದ್ದೆಯ ಶಿಷ್ಟಾಚಾರ ಪಾಲಿಸಲಿ: ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಮಾತನಾಡಿ, ಉಪಸಭಾಪತಿ ಹುದ್ದೆಯಲ್ಲಿರುವ ಮಂಕಾಳ ವೈದ್ಯ ಅವರು ಆ ಹುದ್ದೆಗೆ ತಕ್ಕ ಶಿಷ್ಟಾಚಾರವನ್ನು ಪಾಲಿಸಬೇಕು. ದೇಶದ ಪ್ರಧಾನಿಯ ಕುರಿತು ಮಾತನಾಡುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕಿತ್ತು ಎಂದು ಟೀಕಿಸಿದರು.
ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದರೂ, ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಹೆಸರಿನಲ್ಲಿ ಹೊಸ ಹುದ್ದೆಗಳನ್ನು ಸೃಷ್ಟಿಸಿ ವೆಚ್ಚ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು.
ಭಟ್ಕಳದ ಸ್ಥಳೀಯ ಸಮಸ್ಯೆಗಳತ್ತ ಗಮನ ಹರಿಸಲಿ: ಭಟ್ಕಳದ ರಿಕ್ಷಾ ಚಾಲಕರ ನಿಲ್ದಾಣಕ್ಕೆ ಸಂಬಂಧಿಸಿದ ಜಾಗದ ಸಮಸ್ಯೆ, ಮೀನು ಮಾರುಕಟ್ಟೆಯ ಅವ್ಯವಸ್ಥೆ ಹಾಗೂ ಮುರಿನಕಟ್ಟೆ ವಿಚಾರಗಳತ್ತ ಶಾಸಕರು ಗಮನ ಹರಿಸಬೇಕಿದೆ. ಮೀನು ಮಾರುಕಟ್ಟೆಯನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರೂ, ಈವರೆಗೆ ಅನುದಾನ ಒದಗಿಸಿಲ್ಲ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ, ಮಂಡಲ ಮಾಜಿ ಅಧ್ಯಕ್ಷ ರಾಜೇಶ ನಾಯ್ಕ, ಭಾಸ್ಕರ ಅಳ್ವೆಕೋಡಿ ಮತ್ತಿತರರು ಉಪಸ್ಥಿತರಿದ್ದರು.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ರಾಜಕೀಯ ಸಂಬಂಧಿತ ಸುದ್ದಿ:
ಭಟ್ಕಳ ರಾಜಕೀಯದಲ್ಲಿ ಚರ್ಚೆಗೆ ಬರುತ್ತಿರುವ ಹೆಸರು; ಸೈನಿಕ ಸೇವೆಯಿಂದ ಸಂಘಟನೆಯ ಮುಂಚೂಣಿಗೆ ಶ್ರೀಕಾಂತ ನಾಯ್ಕ
Anantkumar Hegde/ ನಿಗೂಢವಾಗಿಯೇ ಉಳಿದ ಅನಂತಕುಮಾರ ಹೆಗಡೆ ರಾಜಕೀಯ ನಡೆ: ಕಾರ್ಯಕರ್ತರಿಗೆ ನಿರಾಸೆ



