ಭಟ್ಕಳ ಡೈರಿ ವರದಿ

ಭಟ್ಕಳ: ಕಂಡೆಕೊಡ್ಲು ಭಾಗದಲ್ಲಿ ಹಸು ಹಾಗೂ ಕರುಗಳ ಮೇಲೆ ಚಿರತೆ ದಾಳಿ ನಡೆಸಿ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬೋನು ಇರಿಸಿದೆ. ಆದರೆ ಚಿರತೆ ಹಿಡಿಯಲು ಇರಿಸಲಾದ ಬೋನಿನಲ್ಲಿ ಆಹಾರವೇ ಇಲ್ಲದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಚಿರತೆ ದಾಳಿಯ ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಯ ಕ್ರಮಕ್ಕೆ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಇಲಾಖೆ ಬೋನು ಇರಿಸಿದ್ದರೂ, ಚಿರತೆಯನ್ನು ಸೆಳೆಯಲು ಯಾವುದೇ ಆಹಾರವಿಲ್ಲದೆ ಖಾಲಿ ಬೋನು ಇರಿಸಿರುವುದು ಕಾಟಾಚಾರದ ಕ್ರಮ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.

ಆಹಾರವಿಲ್ಲದ ಬೋನಿಗೆ ಚಿರತೆ ಬರುವುದಾದರೂ ಹೇಗೆ? ಚಿರತೆ ಓಡಾಡುವ ಸ್ಥಳದಲ್ಲಿ ಬೋನು ಇರಿಸದೆ ರಸ್ತೆ ಬದಿಯಲ್ಲಿ ಇರಿಸಿದರೆ ಅದು ಹೇಗೆ ಕಾರ್ಯನಿರ್ವಹಿಸಲಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಚಿರತೆ ಕರುವಿನ ಮೇಲೆ ದಾಳಿ ನಡೆಸಿದ ಬಳಿಕ ಮನೆಯ ಮೇಲೂ ದಾಳಿ ನಡೆದಿರುವ ಆತಂಕಕಾರಿ ಘಟನೆ ಸಂಭವಿಸಿದ್ದರೂ, ಅರಣ್ಯ ಇಲಾಖೆಯ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜನರ ಆತಂಕ ನಿವಾರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳುವ ಬದಲು, ಕೇವಲ ಬೋನು ಇರಿಸಿ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ. ಅರಣ್ಯ ಇಲಾಖೆಯ ಈ ಕ್ರಮದ ವಿರುದ್ಧ ಹೊನ್ನಾವರ ಡಿಎಫ್‌ಒ ಅವರಿಗೆ ದೂರು ಸಲ್ಲಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಚಿರತೆ ಸಂಚಾರದ ಸ್ಥಳ ಗುರುತಿಸಿ ಸೂಕ್ತ ರೀತಿಯಲ್ಲಿ ಬೋನು ಇರಿಸುವುದು ಹಾಗೂ ಜನರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಸಂಬಂಧಿತ ಸುದ್ದಿಗಳು:

ಕಂಡೆಕೊಡ್ಲಿನಲ್ಲಿ ಚಿರತೆ ಅಟ್ಟಹಾಸ: ಕರು ಬಲಿ, ಮತ್ತೊಂದು ದನದ ಮೇಲೆ ದಾಳಿ; ಗ್ರಾಮಸ್ಥರಲ್ಲಿ ಆತಂಕ

ಪಟಾಕಿ ಸಿಡಿಸುವುದಷ್ಟೇ ಸಾಲದು, ಸೆರೆಹಿಡಿಯಿರಿ: ಗ್ರಾಮಸ್ಥರ ಒತ್ತಾಯ

ಭಟ್ಕಳದಲ್ಲಿ ಕಾಡುಪ್ರಾಣಿಗಳ ಉಪಟಳ: ಜಾನುವಾರುಗಳೇ ಗುರಿ, ಮನುಷ್ಯರಿಗೂ ಕಂಟಕ