ಭಟ್ಕಳ ಡೈರಿ ವರದಿ

ಭಟ್ಕಳ: ಕೃಷಿ ಭೂಮಿ ಸಮತಟ್ಟು ಮಾಡುವ ನೆಪದಲ್ಲಿ ಗುಡ್ಡವನ್ನೇ ಲಂಬವಾಗಿ ಅಗೆದು ಮಣ್ಣು ಸಾಗಿಸಲಾಗುತ್ತಿದೆ ಎಂಬ ಆರೋಪ ಮಾವಿನಕುರ್ವೆ ವ್ಯಾಪ್ತಿಯ ಗೊಂಡರಕೇರಿಯಲ್ಲಿ ಕೇಳಿಬಂದಿದೆ. ಭಾರಿ ಪ್ರಮಾಣದ ಮಣ್ಣಿನ ಅಗೆತದಿಂದ ಗುಡ್ಡದ ಸ್ವರೂಪ ಬದಲಾಗುತ್ತಿದ್ದು, ಪರಿಸರ ಹಾನಿಯ ಜೊತೆಗೆ ಗುಡ್ಡದ ಕೆಳಭಾಗದಲ್ಲಿ ವಾಸಿಸುವ ೨೦೦ಕ್ಕೂ ಹೆಚ್ಚು ಕುಟುಂಬಗಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ.

ಖಾಸಗಿ ಜಮೀನಿನಲ್ಲಿ ನಡೆಯುತ್ತಿರುವ ಮಣ್ಣಿನ ಅಗೆತ ಹಾಗೂ ಸಾಗಾಟಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ಆರೋಪದಂತೆ, ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಗುಡ್ಡದ ಮೇಲ್ಭಾಗದಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಅರಣ್ಯ ಇಲಾಖೆ ಅಳವಡಿಸಿದ್ದ ಬೇಲಿಯನ್ನೂ ನಾಶಪಡಿಸಲಾಗಿದೆ. ಅರಣ್ಯ ಪ್ರದೇಶದ ಸಮೀಪ ಬೋರ್‌ವೆಲ್ ಕೊರೆಸಿರುವುದಲ್ಲದೆ, ಸಾರ್ವಜನಿಕ ರಸ್ತೆಯ ಬದಿಯಲ್ಲಿದ್ದ ಚರಂಡಿಯನ್ನು ಖಾಸಗಿ ಉದ್ದೇಶಕ್ಕಾಗಿ ಮುಚ್ಚಲಾಗಿದೆ ಎನ್ನಲಾಗಿದೆ.

೩೦ರಿಂದ ೪೦ ಅಡಿ ಲಂಬವಾಗಿ ಗುಡ್ಡ ಅಗೆತ: ಗುಡ್ಡವನ್ನು ಸುಮಾರು ೩೦ರಿಂದ ೪೦ ಅಡಿ ಎತ್ತರಕ್ಕೆ ಲಂಬವಾಗಿ ಅಗೆದು, ಮಣ್ಣನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೇರೆಡೆ ಸಾಗಿಸಲಾಗುತ್ತಿದೆ ಎಂಬುದು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.

ಈ ಹಿಂದೆ ಮಳೆಗಾಲದಲ್ಲಿ ಭೂಕುಸಿತದಂತಹ ಘಟನೆಗಳು ಸಂಭವಿಸಿರುವ ಹಿನ್ನೆಲೆಯಲ್ಲಿ, ಇಷ್ಟೊಂದು ಆಳದಲ್ಲಿ ಗುಡ್ಡ ಅಗೆದಿರುವುದು ಮುಂದಿನ ದಿನಗಳಲ್ಲಿ ಗುಡ್ಡ ಕುಸಿತಕ್ಕೆ ಕಾರಣವಾಗಬಹುದೆಂಬ ಆತಂಕ ಎದುರಾಗಿದೆ. ಗುಡ್ಡದ ಕೆಳಭಾಗದಲ್ಲಿ ವಾಸಿಸುವ ೨೦೦ಕ್ಕೂ ಹೆಚ್ಚು ಕುಟುಂಬಗಳ ಜೀವ ಹಾಗೂ ಆಸ್ತಿಪಾಸ್ತಿಗಳಿಗೆ ಅಪಾಯ ಎದುರಾಗಬಹುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಕೃಷಿ ಗದ್ದೆ, ಕೆರೆಗಳಿಗೂ ಮಣ್ಣಿನ ಹಾನಿ: ಗುಡ್ಡದ ಕೆಳಭಾಗದಲ್ಲಿ ಭತ್ತದ ಕೃಷಿ ಗದ್ದೆಗಳು, ಸಾರ್ವಜನಿಕ ಕೆರೆಗಳು ಹಾಗೂ ತೋಡುಗಳಿವೆ. ಗುಡ್ಡ ಅಗೆತದಿಂದ ಸಡಿಲಗೊಂಡ ಮಣ್ಣು ಮಳೆನೀರಿನೊಂದಿಗೆ ಕೊಚ್ಚಿಕೊಂಡು ಕೃಷಿ ಭೂಮಿಗೆ ಸೇರುತ್ತಿದ್ದು, ಗದ್ದೆಗಳ ಫಲವತ್ತತೆ ಕುಸಿಯುವ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಮಣ್ಣು ಕೆರೆಗಳಿಗೆ ಹರಿದು ಸೇರುವುದರಿಂದ ಜಲಮೂಲಗಳು ಹೂಳು ತುಂಬಿ ಮುಚ್ಚಿಹೋಗುವ ಸಾಧ್ಯತೆಯೂ ಇದೆ. ಇದು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದರ ಜೊತೆಗೆ ಅಂತರ್ಜಲದ ಮೇಲೂ ದುಷ್ಪರಿಣಾಮ ಬೀರಬಹುದು ಎಂಬ ಕಳವಳ ವ್ಯಕ್ತವಾಗಿದೆ.

ಅನುಮತಿ ಪಡೆದಿದ್ದಾರೆಯೇ? ಅಧಿಕಾರಿಗಳಿಗೆ ಗ್ರಾಮಸ್ಥರ ಪ್ರಶ್ನೆ: ಕೃಷಿ ಭೂಮಿ ಸಮತಟ್ಟು ಮಾಡುವ ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಪ್ರಮಾಣದ ಮಣ್ಣಿನ ಅಗೆತಕ್ಕೆ ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆಯೇ? ಅರಣ್ಯ ಹಾಗೂ ಕಂದಾಯ ಇಲಾಖೆಯ ನಿಯಮಗಳನ್ನು ಪಾಲಿಸಲಾಗಿದೆಯೇ? ಸಾರ್ವಜನಿಕ ಚರಂಡಿಯನ್ನು ಮುಚ್ಚಲು ಅನುಮತಿ ನೀಡಿದವರು ಯಾರು? ಎಂಬ ಪ್ರಶ್ನೆಗಳು ಸ್ಥಳೀಯರಿಂದ ಕೇಳಿಬರುತ್ತಿವೆ.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ಮಣ್ಣಿನ ಅಗೆತದ ಕಾನೂನುಬದ್ಧತೆ, ಅರಣ್ಯ ಪ್ರದೇಶದ ಮೇಲಿನ ಪರಿಣಾಮ, ಕೃಷಿ ಭೂಮಿ ಹಾಗೂ ಜಲಮೂಲಗಳ ರಕ್ಷಣೆ ಮತ್ತು ಕೆಳಭಾಗದಲ್ಲಿರುವ ಕುಟುಂಬಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗೊಂಡರಕೇರಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಭಟ್ಕಳದಲ್ಲಿ ಚಿರತೆ ದಾಳಿ ಆತಂಕದ ನಡುವೆಯೇ ಖಾಲಿ ಬೋನು! ಅರಣ್ಯ ಇಲಾಖೆಯ ಕ್ರಮಕ್ಕೆ ಕಂಡೆಕೋಡ್ಲು ಗ್ರಾಮಸ್ಥರ ಆಕ್ರೋಶ

ನೀರು ಉಳಿಸಿ ಎಂಬ ಅಭಿಯಾನ ನಡೆಸುವ ಭಟ್ಕಳ ನಗರಸಭೆಯಲ್ಲೇ ನೀರು ಪೋಲು!