ಭಟ್ಕಳ ಡೈರಿ ವರದಿ

ಭಟ್ಕಳ: ವಿದ್ಯಾರ್ಥಿಗಳಲ್ಲಿ ಅಡಗಿರುವ ಸೃಜನಶೀಲತೆ, ಕಲಾತ್ಮಕ ಅಭಿರುಚಿ ಹಾಗೂ ಸುಪ್ತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಬೆಳಕೆ ವಲಯ ಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿಯು ಜಾಲಿಯ ಶ್ರೀ ವೆಂಕಟೇಶ್ವರ ನಾಮಧಾರಿ ವಿದ್ಯಾವರ್ಧಕ ಸಭಾಭವನದಲ್ಲಿ ಸಂಭ್ರಮದಿಂದ ನಡೆಯಿತು.

ಜಾಲಿಯ ಸರಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಶಿಕ್ಷಣ ತಜ್ಞ ಹಾಗೂ ನಿವೃತ್ತ ಶಿಕ್ಷಕ ಡಿ.ಬಿ. ನಾಯ್ಕ ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಅಡಗಿರುವ ಸೃಜನಶೀಲತೆ, ಕಲಾತ್ಮಕ ಅಭಿರುಚಿ ಮತ್ತು ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಮಾತನಾಡಿ, ಪ್ರತಿಭಾ ಕಾರಂಜಿ ಶಾಲಾ ಶಿಕ್ಷಣ ಇಲಾಖೆಯ ಆಶಯದಂತೆ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಮಹತ್ವದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ ಎಂದರು.

ಜಾಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಶಾಂತರಾಮ ನಾಯ್ಕ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಜಾಲಿ ಸರಕಾರಿ ಪ್ರೌಢಶಾಲೆ ಹಲವು ವರ್ಷಗಳಿಂದ ಶೇಕಡಾ ನೂರು ಫಲಿತಾಂಶ ದಾಖಲಿಸುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಪ್ರತಿಭಾ ಕಾರಂಜಿಗಳು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪ್ರತಿಭೆ ಹೊರಹೊಮ್ಮಲು ಸಹಕಾರಿಯಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದೇವಿದಾಸ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಹೊರತರುವುದೇ ಶಿಕ್ಷಣದ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರತಿಭಾ ಕಾರಂಜಿಗೆ ಶುಭ ಹಾರೈಸಿದರು.

ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ಸಂಶೋಧಕಿ ಭಾರತಿ ತಿಮ್ಮಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪಟ್ಟಣ ಪಂಚಾಯತ್ ಸದಸ್ಯ ದಯಾನಂದ ನಾಯ್ಕ, ನಾಮಧಾರಿ ಸಂಘದ ಅಧ್ಯಕ್ಷ ಎಂ.ಡಿ. ನಾಯ್ಕ, ಜಾಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಪ್ಪ ನಾಯ್ಕ, ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್‌ನ ವಸಂತ ನಾಯ್ಕ, ಉದ್ದಿಮೆದಾರ ರವಿ ನಾಯ್ಕ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಂಕರ ಗೊಂಡ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ ನಾಯ್ಕ, ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕ ಯು.ಎ. ಲೋಹಾನಿ, ವಿಶ್ವಕರ್ಮ ನಿಗಮದ ಮಾಜಿ ಸದಸ್ಯ ದೇವಿದಾಸ ಆಚಾರ್ಯ, ಪ್ರತಿಭಾ ಕಾರಂಜಿ ತಾಲೂಕು ನೋಡಲ್ ಅಧಿಕಾರಿ ರಾಘವೇಂದ್ರ ಮಡಿವಾಳ ಹಾಗೂ ನಿವೃತ್ತ ಸರ್ಕಾರಿ ಸಿಬ್ಬಂದಿ ಮಾಸ್ತಿ ಗೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬೆಳಕೆ ವಲಯದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಗಾಯನ, ನೃತ್ಯ, ಭಾಷಣ, ಆಶುಭಾಷಣ, ಅಭಿನಯ, ಚಿತ್ರಕಲೆ, ಕವನ ವಾಚನ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಮನಮೋಹಕ ಪ್ರದರ್ಶನಗಳು ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆದವು.

ಮುಖ್ಯಾಧ್ಯಾಪಕ ವಿನಾಯಕ ಅವಧಾನಿ ಸ್ವಾಗತಿಸಿದರು. ಶಿಕ್ಷಕ ಸಾಹಿತಿ ಶ್ರೀಧರ ಶೇಟ ಕಾರ್ಯಕ್ರಮ ನಿರೂಪಿಸಿದರು. ತಿಮ್ಮಪ್ಪ ದೇವಡಿಗ ದಾನಿಗಳ ಪಟ್ಟಿಯನ್ನು ವಾಚಿಸಿದರು. ಗಣೇಶ ಗೌಡ ವಂದಿಸಿದರು. ವಿಜೇತಾ, ಮೆಹೆಕ್, ಪ್ರಾರ್ಥನಾ, ಚಂದನಾ ಹಾಗೂ ಅಮೂಲ್ಯ ಸಂಗಡಿಗರು ಪ್ರಾರ್ಥಿಸಿದರು.

ಶಿಕ್ಷಕ ವೃಂದದ ಮೋಹಿನಿ ಬಾನಾವಳಿಕರ, ರಜನಿ ಶೆಟ್ಟಿ, ವೀಣಾಶ್ರೀ ಮಡಿವಾಳ ಹಾಗೂ ಜಾಲಿ ಪ್ರಾಥಮಿಕ ಶಾಲೆಯ ಶಿಕ್ಷಕ-ಶಿಕ್ಷಕಿಯರು ಕಾರ್ಯಕ್ರಮಕ್ಕೆ ಸಹಕರಿಸಿದರು. ಎಸ್‌ಡಿಎಂಸಿ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಜಾಲಿ ಊರಿನ ನಾಗರಿಕರು ಉಪಸ್ಥಿತರಿದ್ದರು.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಭಟ್ಕಳದ ಜಾಲಿ ಗ್ರಾಮದ ಭಾರತಿ ನಾಯ್ಕಗೆ ಡಾಕ್ಟರೇಟ್ ಗೌರವ; ಐದು ವರ್ಷಗಳ ಸಂಶೋಧನೆಗೆ ಮನ್ನಣೆ

ಜಾಲಿಯಲ್ಲಿ ಕಳೆಗಟ್ಟಿದ ‘ಕೃಷ್ಣ ಲೀಲಾ–೦೨’: ಪುಟಾಣಿಗಳ ಕೃಷ್ಣ ವೇಷಧಾರಿ ಸ್ಪರ್ಧೆ