ಭಟ್ಕಳ ಡೈರಿ ವರದಿ
ಭಟ್ಕಳ: ಜಾಲಿ ಗ್ರಾಮದ ಪ್ರತಿಭೆ ಭಾರತಿ ತಿಮ್ಮಪ್ಪ ನಾಯ್ಕ ಅವರು ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಯೆನೆಪೋಯಾ (ಡೀಮ್ಡ್ ಟು ಬಿ ಯೂನಿವರ್ಸಿಟಿ) ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್ಡಿ) ಪದವಿ ಪಡೆದಿದ್ದು, ಕುಟುಂಬದವರು ಹಾಗೂ ಜಾಲಿ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದ್ದಾರೆ.
ಜಾಲಿ ಗ್ರಾಮದ ತಿಮ್ಮಪ್ಪ ಮತ್ತು ಲಕ್ಷ್ಮೀ ದಂಪತಿಯ ಪುತ್ರಿಯಾದ ಭಾರತಿ ಅವರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದಲ್ಲಿ ಐದು ವರ್ಷಗಳ ಕಾಲ ಸಂಶೋಧನೆ ನಡೆಸಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಾನವರಲ್ಲಿ ಶಿಲೀಂಧ್ರದಿಂದ ಉಂಟಾಗುವ ಸೋಂಕಿಗೆ ಸಂಬಂಧಿಸಿದಂತೆ “Molecular Characterization of the Human Fungal Pathogen Malassezia” ಎಂಬ ವಿಷಯದ ಕುರಿತು ಅವರು ಸಂಶೋಧನೆ ನಡೆಸಿದ್ದಾರೆ.
ಮಲಸೇಜಿಯಾ (Malassezia) ಎಂಬ ಶಿಲೀಂಧ್ರದ ಅಣುಮಟ್ಟದ ಗುಣಲಕ್ಷಣಗಳನ್ನು ಅಧ್ಯಯನ ಮಾಡಿರುವುದು ಅವರ ಸಂಶೋಧನೆಯ ಪ್ರಮುಖ ಅಂಶವಾಗಿದೆ. ಈ ಅಧ್ಯಯನವು ಶಿಲೀಂಧ್ರದ ಸ್ವರೂಪ ಮತ್ತು ಅದರ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವ ಹೊಂದಿದೆ.
ಯೆನೆಪೋಯಾ ವಿಶ್ವವಿದ್ಯಾಲಯವು ಅಕ್ಟೋಬರ್ ೭ರಂದು ಪದವಿ ಪ್ರದಾನ ಮಾಡಿದ್ದು, ಭಾರತಿ ನಾಯ್ಕ ಅವರಿಗೆ ಅಕ್ಟೋಬರ್ ೨೪ರಂದು ಪ್ರಮಾಣಪತ್ರ ಲಭಿಸಿದೆ. ಭಾರತಿ ಅವರ ಈ ಸಾಧನೆಯು ಕುಟುಂಬದವರು, ಬಂಧುಗಳು ಹಾಗೂ ಹಿತೈಷಿಗಳಲ್ಲಿ ಹರ್ಷ ಮೂಡಿಸಿದೆ. ಜಾಲಿ ಗ್ರಾಮದ ಹೆಮ್ಮೆಯಾಗಿ ಹೊರಹೊಮ್ಮಿರುವ ಅವರಿಗೆ ಮುಂದಿನ ಶೈಕ್ಷಣಿಕ ಮತ್ತು ಸಂಶೋಧನಾ ಪಯಣದಲ್ಲಿ ಇನ್ನಷ್ಟು ಯಶಸ್ಸು ದೊರೆಯಲಿ ಎಂದು ಹಿತೈಷಿಗಳು ಹಾರೈಸಿದ್ದಾರೆ.
ಇದನ್ನೂ ಓದಿ :
ಭಟ್ಕಳದಲ್ಲಿ ಕಳೆದೊಂದು ವಾರ: ಹಸಿರು ಸಂಕಲ್ಪದಿಂದ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳವರೆಗೆ
ಭಗವದ್ಗೀತೆಯ ಜ್ಞಾನ ಬದುಕಿನ ಸವಾಲುಗಳಿಗೆ ದಾರಿ ತೋರಿಸುತ್ತದೆ: ರಾಜೇಶ ನಾಯಕ




