ಭಟ್ಕಳ ಡೈರಿ ವರದಿ

ಭಟ್ಕಳ: ಪಠ್ಯಪುಸ್ತಕದ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನ ಮತ್ತು ಆಲೋಚನಾ ಸಾಮರ್ಥ್ಯಕ್ಕೂ ವೇದಿಕೆ ಕಲ್ಪಿಸುವ ಉದ್ದೇಶದಿಂದ ಗೆಳೆಯರ ಬಳಗ ಮಣ್ಕುಳಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆ ಮಣ್ಕುಳಿಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು.

ನಾಲ್ಕರಿಂದ ಏಳನೇ ತರಗತಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಶಿವರಾಮ ಕಾರಂತ, ಯು.ಆರ್. ಅನಂತಮೂರ್ತಿ, ದ.ರಾ. ಬೇಂದ್ರೆ ಹಾಗೂ ಕುವೆಂಪು ಹೆಸರಿನ ನಾಲ್ಕು ತಂಡಗಳು ಸೆಣಸಾಡಿದವು. ಸ್ಪರ್ಧೆಯಲ್ಲಿ ದ.ರಾ. ಬೇಂದ್ರೆ ತಂಡ ಪ್ರಥಮ ಸ್ಥಾನ, ಯು.ಆರ್. ಅನಂತಮೂರ್ತಿ ತಂಡ ದ್ವಿತೀಯ ಹಾಗೂ ಕುವೆಂಪು ತಂಡ ತೃತೀಯ ಸ್ಥಾನ ಪಡೆದುಕೊಂಡವು.

ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ: ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಎಸ್.ಪಿ. ಭಟ್, ವಿದ್ಯಾರ್ಥಿಗಳು ಶಾಲೆಯಲ್ಲಿ ನಡೆಯುವ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಲು ಹಾಗೂ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗುತ್ತವೆ. ಪ್ರತಿಯೊಂದು ಸ್ಪರ್ಧೆಯಲ್ಲೂ ಆಸಕ್ತಿಯಿಂದ ಭಾಗವಹಿಸುವಂತೆ ಅವರು ಕರೆ ನೀಡಿದರು.

ಸ್ಥಳೀಯ ನಿವಾಸಿ ಹಾಗೂ ಬೈಂದೂರು ಕಾಲೇಜಿನ ಉಪನ್ಯಾಸಕ ರವಿ ನಾಯ್ಕ ಮಾತನಾಡಿ, ಸರ್ಕಾರಿ ಶಾಲೆಗಳು ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಊರಿನ ಜನರು ಶಾಲೆಯ ಬೆಳವಣಿಗೆಗೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಗೆಳೆಯರ ಬಳಗ ಮಣ್ಕುಳಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಶಾಲೆಯ ಮುಖ್ಯ ಶಿಕ್ಷಕಿ ವನಜಾ ಸ್ವಾಗತಿಸಿ, ವಂದಿಸಿದರು. ಸಹ ಶಿಕ್ಷಕಿಯರಾದ ಲಕ್ಷ್ಮೀ ನಾಯ್ಕ, ನಾಗರತ್ನ ಹಾಗೂ ತುಳಸಿ ಉಪಸ್ಥಿತರಿದ್ದರು. ಗೆಳೆಯರ ಬಳಗದ ಅಧ್ಯಕ್ಷ ಯೋಗೇಶ ನಾಯ್ಕ, ರಮೇಶ ನಾಯ್ಕ, ಪಾಂಡು ನಾಯ್ಕ, ಅನಂತ ನಾಯ್ಕ, ಮನೋಜ ನಾಯ್ಕ, ನಾಗೇಶ ನಾಯ್ಕ, ಕಿಶೋರ ನಾಯ್ಕ, ಸುಬ್ರಾಯ ನಾಯ್ಕ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷ ರಮೇಶ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬೈಂದೂರಿನ ಬಿ.ಆರ್.ಸಿ. ಮಂಜುನಾಥ ದೇವಾಡಿಗ ಅವರು ರಸಪ್ರಶ್ನೆ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅವರ ಸೇವೆಯನ್ನು ಗುರುತಿಸಿದ ಗೆಳೆಯರ ಬಳಗ ಮಣ್ಕುಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮದಲ್ಲಿ ನಿರಂತರವಾಗಿ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಗೆಳೆಯರ ಬಳಗ, ಇದೀಗ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಆಸಕ್ತಿ ತೋರಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಧಾರವಾಡದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಟ್ಕಳದ ಗುರು ಸುಧೀಂದ್ರ ಕಾಲೇಜಿಗೆ ಪದಕಗಳ ಸಂಭ್ರಮ!

ನಿರ್ಮಾಣ ತ್ಯಾಜ್ಯವೇ ರಸ್ತೆ ನಿರ್ಮಾಣಕ್ಕೆ ಸಂಪನ್ಮೂಲ: ಚಂದನಶ್ರೀ ಸಂಶೋಧನೆಗೆ ಡಾಕ್ಟರೇಟ್