ಭಟ್ಕಳ ಡೈರಿ ವರದಿ
ಭಟ್ಕಳ: ಕಬಡ್ಡಿ ಅಖಾಡದಲ್ಲಿ ರಾಜ್ಯದ ಪ್ರತಿಭಾವಂತ ಆಟಗಾರರ ಸಾಮರ್ಥ್ಯ ಪ್ರದರ್ಶನಕ್ಕೆ ಭಟ್ಕಳ ವೇದಿಕೆಯಾಗುತ್ತಿದೆ. ಐಸ್ ಫ್ಯಾಕ್ಟರಿ ಸಮೀಪದ ಕೆ.ಪಿ. ಮೈದಾನದಲ್ಲಿ ನವೆಂಬರ್ ೨೭ರಿಂದ ೨೯ರವರೆಗೆ ಮೂರು ದಿನಗಳ ಕಾಲ ಹೊನಲು ಬೆಳಕಿನ ರಾಜ್ಯಮಟ್ಟದ ಗಂಡು-ಬೇರುಂಡ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ರಾಜ್ಯದ ಹತ್ತು ಜಿಲ್ಲೆಗಳ ತಂಡಗಳು ಪಾಲ್ಗೊಳ್ಳಲಿರುವ ಈ ಪಂದ್ಯಾವಳಿಗೆ ಪ್ರೊ ಕಬಡ್ಡಿಯ ಖ್ಯಾತ ಆಟಗಾರ, ಅರ್ಜುನ ಪ್ರಶಸ್ತಿ ಪುರಸ್ಕೃತ ಹಾಗೂ ಭಾರತೀಯ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ ಆಗಮಿಸುತ್ತಿರುವುದು ಕ್ರೀಡಾಭಿಮಾನಿಗಳಲ್ಲಿ ವಿಶೇಷ ಉತ್ಸಾಹ ಮೂಡಿಸಿದೆ.
ಇವೆಂಟ್ ಸ್ಪೋರ್ಟ್ಸ್ ಕಾರ್ಪೊರೇಷನ್ ಹಾಗೂ ಜಿಲ್ಲಾ ಮತ್ತು ತಾಲೂಕು ಕಬಡ್ಡಿ ಅಸೋಸಿಯೇಷನ್ಗಳ ಸಹಯೋಗದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ.
ಪಂದ್ಯಾವಳಿ ಸಮಿತಿ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಕೆ.ಪಿ. ಮೈದಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ ಹಾಗೂ ಬೀನಾ ವೈದ್ಯ ಅವರು ಪಂದ್ಯಾವಳಿಗೆ ಪ್ರಾಯೋಜಕತ್ವದ ಮೂಲಕ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ನವೆಂಬರ್ ೨೭ರಂದು ಸಂಜೆ ೪.೩೦ಕ್ಕೆ ಪ್ರಾರ್ಥನೆಯೊಂದಿಗೆ ಪಂದ್ಯಾವಳಿ ಆರಂಭವಾಗಲಿದೆ. ೮.೩೦ರವರೆಗೆ ಪಂದ್ಯಗಳು ನಡೆದ ಬಳಿಕ ಅಧಿಕೃತ ಉದ್ಘಾಟನಾ ಸಮಾರಂಭ ಜರುಗಲಿದೆ. ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ ಪಂದ್ಯಾವಳಿಗೆ ಚಾಲನೆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಕಾರವಾರ ಶಾಸಕ ಸತೀಶ್ ಸೈಲ್, ಸುರತ್ಕಲ್ ಮಾಜಿ ಶಾಸಕ ಮುಹಿದ್ದೀನ್ ಬಾವಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಬಿ.ಸಿ. ರಮೇಶ್ ಆಗಮನಕ್ಕೆ ಕ್ರೀಡಾಭಿಮಾನಿಗಳ ಕಾತರ: ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಸಿ. ರಮೇಶ್ ಅವರೊಂದಿಗೆ ಅವರ ಸಹೋದರ ಬಿ.ಸಿ. ಸುರೇಶ್, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಚಲುವರಾಜ್, ಶಣ್ಮುಗ ಮುನಿರಾಜು ಹಾಗೂ ಗೌರೀಶ್ ಸೇರಿದಂತೆ ಹಲವು ಪ್ರಮುಖ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಭೋಯರ್ ಹರ್ಷಲ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರಲಿದ್ದಾರೆ.
ಜಿಲ್ಲಾ ತಂಡದಲ್ಲಿ ಭಟ್ಕಳದ ನಾಲ್ವರು ಆಟಗಾರರು: ಉತ್ತರ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಲು ಭಟ್ಕಳದ ವಿನೋದ ನಾಯ್ಕ, ರಂಜಿತ್ ನಾಯ್ಕ, ರತನ್ ನಾಯ್ಕ ಹಾಗೂ ಸುಶೀಲ್ ಕಾಮ್ರೇಕರ್ ಆಯ್ಕೆಯಾಗಿದ್ದಾರೆ. ಈ ನಾಲ್ವರು ಆಟಗಾರರು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದ್ದು, ಜಿಲ್ಲಾ ತಂಡ ಚಾಂಪಿಯನ್ ಆಗುವ ನಿರೀಕ್ಷೆಯಿದೆ ಎಂದು ಇನಾಯತುಲ್ಲಾ ಶಾಬಂದ್ರಿ ತಿಳಿಸಿದರು.
ರಾಜ್ಯದ ಹತ್ತು ಜಿಲ್ಲೆಗಳ ತಂಡಗಳ ಜತೆಗೆ ಭಟ್ಕಳದ ನಾಲ್ಕು ಸ್ಥಳೀಯ ತಂಡಗಳಿಗೂ ಸ್ಪರ್ಧೆಯಲ್ಲಿ ಅವಕಾಶ ನೀಡಲಾಗಿದೆ. ಇದರಿಂದ ಸ್ಥಳೀಯ ಯುವ ಆಟಗಾರರಿಗೆ ರಾಜ್ಯದ ಅನುಭವಿ ಆಟಗಾರರೊಂದಿಗೆ ಸೆಣಸಾಡುವ ಅವಕಾಶ ಸಿಗಲಿದೆ. ಈ ಹಿಂದೆ ಬೆಳಗಾವಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಹತ್ತು ಜಿಲ್ಲೆಗಳ ತಂಡಗಳು ಹಾಗೂ ಮೈಸೂರಿನಲ್ಲಿ ನಡೆದ ಪಂದ್ಯಾವಳಿಯಲ್ಲಿ ಹನ್ನೊಂದು ಜಿಲ್ಲೆಗಳ ತಂಡಗಳು ಭಾಗವಹಿಸಿದ್ದವು. ಭಟ್ಕಳದಲ್ಲಿ ನಡೆಯುವ ಪಂದ್ಯಾವಳಿಯಿಂದ ನಾಲ್ಕು ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿವೆ. ಮುಂದಿನ ಹಂತದ ಪಂದ್ಯಾವಳಿಯನ್ನು ಬೆಂಗಳೂರು ಅಥವಾ ಮಂಗಳೂರಿನಲ್ಲಿ ಆಯೋಜಿಸುವ ಸಾಧ್ಯತೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಗ್ರಾಮೀಣ ಪ್ರತಿಭೆಗಳಿಗೆ ಪ್ರೊ ಕಬಡ್ಡಿ ವೇದಿಕೆ ಕಲ್ಪಿಸುವ ಗುರಿ: ಕೇವಲ ಪಂದ್ಯಾವಳಿ ನಡೆಸಿ ವಿಜೇತರನ್ನು ಘೋಷಿಸುವುದಷ್ಟೇ ಆಯೋಜಕರ ಉದ್ದೇಶವಲ್ಲ. ಗ್ರಾಮೀಣ ಭಾಗದಲ್ಲಿ ಅಡಗಿರುವ ಪ್ರತಿಭಾವಂತ ಕಬಡ್ಡಿ ಆಟಗಾರರನ್ನು ಗುರುತಿಸಿ, ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅವಕಾಶ ಕಲ್ಪಿಸುವುದು ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಹತ್ತು ಜಿಲ್ಲೆಗಳ ಆಟಗಾರರ ವೈಯಕ್ತಿಕ ವಿವರಗಳು, ಆಟದ ಅಂಕಿ-ಅಂಶಗಳು ಹಾಗೂ ಪಂದ್ಯಗಳ ವಿಡಿಯೋ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ. ಇವುಗಳ ಮೂಲಕ ಪ್ರೊ ಕಬಡ್ಡಿ ಸೇರಿದಂತೆ ಉನ್ನತ ಮಟ್ಟದ ಕ್ರೀಡಾ ವೇದಿಕೆಗಳಲ್ಲಿ ಆಟಗಾರರಿಗೆ ಅವಕಾಶ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಇನಾಯತುಲ್ಲಾ ಶಾಬಂದ್ರಿ ವಿವರಿಸಿದರು.
ಆಟಗಾರರಿಗೆ ವಸತಿ, ಊಟೋಪಚಾರದ ವ್ಯವಸ್ಥೆ: ನವೆಂಬರ್ ೨೭ರಂದು ಎಲ್ಲ ತಂಡಗಳು ಭಟ್ಕಳಕ್ಕೆ ಆಗಮಿಸಲಿದ್ದು, ಆಟಗಾರರು, ತರಬೇತುದಾರರು, ಅಂಪೈರ್ಗಳು ಹಾಗೂ ವಿವಿಧ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.
ನವೆಂಬರ್ ೨೮ರಂದು ವಿಶೇಷ ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನವೆಂಬರ್ ೨೯ರಂದು ಸಮಾರೋಪ ಸಮಾರಂಭ ಜರುಗಲಿದ್ದು, ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ, ಕುಮಟಾ ಶಾಸಕ ದಿನಕರ ಶೆಟ್ಟಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಕಬಡ್ಡಿ ಅಸೋಸಿಯೇಷನ್ ಪ್ರಮುಖ ಶ್ರೀಧರ ನಾಯ್ಕ ಮುಟ್ಟಳ್ಳಿ ಮಾತನಾಡಿ, ಮೂರು ದಿನಗಳ ಪಂದ್ಯಾವಳಿಗೆ ರಾಜ್ಯದ ಪ್ರಮುಖ ಕಬಡ್ಡಿ ತಾರೆಗಳು ಭಟ್ಕಳಕ್ಕೆ ಆಗಮಿಸುತ್ತಿರುವುದು ಸ್ಥಳೀಯ ಕ್ರೀಡಾಪಟುಗಳಿಗೆ ದೊಡ್ಡ ಪ್ರೇರಣೆಯಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಇಂಶಾದ್, ಅಜೀಜುರ್ರೆಹಮಾನ್, ಅಬ್ದುಲ್ ರವೂಫ್, ಜಾಫರ್, ಪ್ರಕಾಶ ನಾಯ್ಕ, ದಿನೇಶ ಗವಾಳಿ, ಆದಮ್ ಪಣಬುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭಟ್ಕಳದಲ್ಲಿ ಕಬಡ್ಡಿ ಕ್ರೀಡೆಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಶಾಹೀನ್ ಕ್ಲಬ್ ವತಿಯಿಂದ ನಾಲ್ಕು ಜಿಲ್ಲೆಗಳ ತಂಡಗಳನ್ನು ಒಳಗೊಂಡ ಮತ್ತೊಂದು ಪಂದ್ಯಾವಳಿ ಆಯೋಜಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಪಂದ್ಯಾವಳಿ ಮುಗಿದ ಬಳಿಕ ಈ ಕುರಿತು ಹೆಚ್ಚಿನ ವಿವರ ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಉತ್ತರ ಕನ್ನಡದ ಎಲ್ಲಾ ತಾಲೂಕುಗಳಿಗೂ ಕಬಡ್ಡಿ ಮ್ಯಾಟ್: ಸಂಸದ ಕಾಗೇರಿ ಭರವಸೆ
ಖೇಲೋ ಇಂಡಿಯಾ, ರಾಷ್ಟ್ರೀಯ ಕಬಡ್ಡಿ ಆಡಿದ ಭಟ್ಕಳದ ಆಟಗಾರರಿಗೆ ಉದ್ಯೋಗಾವಕಾಶ ಯಾವಾಗ?



