ಭಟ್ಕಳ ಡೈರಿ ವರದಿ

ಭಟ್ಕಳ: ಧಾರವಾಡದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ-ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ–೨೦೨೬ರಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿವಿಧ ಅಥ್ಲೆಟಿಕ್ಸ್ ವಿಭಾಗಗಳಲ್ಲಿ ಪದಕ ಹಾಗೂ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಕಾಲೇಜು ಮತ್ತು ಭಟ್ಕಳದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕಾಲೇಜಿನ ಕ್ರೀಡಾಪಟುಗಳು ವೈಯಕ್ತಿಕ ಹಾಗೂ ತಂಡ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಹಲವು ವಿಭಾಗಗಳಲ್ಲಿ ಮುಂಚೂಣಿಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಕ್ರೀಡಾಪಟುಗಳ ಸಾಧನೆಯ ವಿವರ: ಆಶಿತಾ ನಾಯ್ಕ ಹೆಪ್ಟಾಥ್ಲಾನ್‌ನಲ್ಲಿ ದ್ವಿತೀಯ ಸ್ಥಾನ, ೪x೧೦೦ ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಹಾಗೂ ೪x೪೦೦ ಮೀಟರ್ ಮಿಶ್ರ ರಿಲೇಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಪವಿತ್ರಾ ಮಡಿವಾಳ ಟ್ರಿಪಲ್ ಜಂಪ್‌ನಲ್ಲಿ ತೃತೀಯ ಸ್ಥಾನ, ಲಾಂಗ್ ಜಂಪ್‌ನಲ್ಲಿ ನಾಲ್ಕನೇ ಸ್ಥಾನ ಹಾಗೂ ೪x೧೦೦ ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಭವ್ಯಾ ದೇವಾಡಿಗ ಹೈಜಂಪ್‌ನಲ್ಲಿ ದ್ವಿತೀಯ ಸ್ಥಾನ ಹಾಗೂ ೪x೧೦೦ ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮಾನ್ಯಾ ಗೌಡ ಶಾಟ್‌ಪುಟ್ ಮತ್ತು ಡಿಸ್ಕಸ್ ಥ್ರೋ ಎರಡೂ ವಿಭಾಗಗಳಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ನಂದಿನಿ ನಾಯ್ಕ ೪x೧೦೦ ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸುಜಲ್ ನಾಯ್ಕ ೨೦೦ ಮೀಟರ್ ಓಟದಲ್ಲಿ ದ್ವಿತೀಯ, ೪೦೦ ಮೀಟರ್ ಓಟದಲ್ಲಿ ನಾಲ್ಕನೇ ಸ್ಥಾನ ಹಾಗೂ ೪x೪೦೦ ಮೀಟರ್ ಮಿಶ್ರ ರಿಲೇಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಕುಲ್ದೀಪ್ ಕುಮಾರ್ ಜಾವೆಲಿನ್ ಥ್ರೋ ಮತ್ತು ಡಿಸ್ಕಸ್ ಥ್ರೋ ಎರಡೂ ವಿಭಾಗಗಳಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಗುರುರಾಜ ನಾಯ್ಕ ಡೆಕಾಥ್ಲಾನ್‌ನಲ್ಲಿ ನಾಲ್ಕನೇ ಸ್ಥಾನ, ೪x೪೦೦ ಮೀಟರ್ ಮಿಶ್ರ ರಿಲೇ ಹಾಗೂ ೪x೧೦೦ ಮೀಟರ್ ರಿಲೇ ವಿಭಾಗಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ತೋರಿದ ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸುರೇಂದ್ರ ಶಾನಭಾಗ, ಉಪಾಧ್ಯಕ್ಷ ರವೀಂದ್ರ ಕೊಲ್ಲೆ, ಮ್ಯಾನೇಜಿಂಗ್ ಟ್ರಸ್ಟಿ ರಾಜೇಶ ನಾಯಕ ಹಾಗೂ ಆಡಳಿತ ಮಂಡಳಿಯ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ದೈಹಿಕ ಶಿಕ್ಷಣ ನಿರ್ದೇಶಕ ವಿನಾಯಕ ನಾಯ್ಕ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದದವರು ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿ ಮುಂದಿನ ಕ್ರೀಡಾ ಸ್ಪರ್ಧೆಗಳಲ್ಲಿಯೂ ಹೆಚ್ಚಿನ ಯಶಸ್ಸು ದೊರೆಯಲಿ ಎಂದು ಹಾರೈಸಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಭಟ್ಕಳದ ಶ್ರೀಗುರು ಸುಧೀಂದ್ರ ಕಾಲೇಜಿಗೆ ಸಿಎ ಪರೀಕ್ಷೆಯಲ್ಲಿ ಹೆಮ್ಮೆ ತಂದ ವಿದ್ಯಾರ್ಥಿಗಳು

ಕ್ಯಾಮೆರಾ ಮೂಲಕ ಅಪರಾಧ ತನಿಖೆಯ ಪಾಠ: ಸುಧೀಂದ್ರ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ