ಭಟ್ಕಳ ಡೈರಿ ವರದಿ
ಹೊನ್ನಾವರ: ಗ್ರಾಮೀಣ ಭಾಗದ ದುಡಿಯುವ ಜನರಿಗೆ ವಿಬಿಜಿ ರಾಮ್ ಜಿ ಯೋಜನೆ ಉತ್ತಮ ಅವಕಾಶಗಳನ್ನು ಒದಗಿಸುವ ವರದಾನವಾಗಿದೆ. ಆದರೆ, ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯಲು ಜನರು ಆಸಕ್ತಿಯಿಂದ ಮುಂದೆ ಬರಬೇಕು. ಅಗತ್ಯ ನಿಯಮಾವಳಿಗಳನ್ನು ಸಮರ್ಪಕವಾಗಿ ಪಾಲಿಸಿದರೆ ಫಲಾನುಭವಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸಾಧ್ಯ ಎಂದು ಭಟ್ಕಳ ತಾಲೂಕು ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ಹೇಳಿದರು.
ಹೊನ್ನಾವರ ತಾಲೂಕಿನ ಕಾಸರಕೋಡು ಗ್ರಾಮ ಪಂಚಾಯತ್ನಲ್ಲಿ ಗುರುವಾರ ನಡೆದ ೨೦೨೬-೨೭ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಸಾಮಾಜಿಕ ಪರಿಶೋಧನಾ ವರದಿಯನ್ನು ಮಂಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಜಯಶ್ರೀ ನಾಯ್ಕ ಮಾತನಾಡಿ, ಸಾಮಾಜಿಕ ಪರಿಶೋಧನಾ ಗ್ರಾಮಸಭೆಗಳಿಗೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಇದರಿಂದ ಪರಿಶೋಧನೆಯಲ್ಲಿ ಕಂಡುಬಂದ ಲೋಪದೋಷಗಳ ಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉದಯ ಬಾಂದೇಕರ್ ಸ್ವಾಗತಿಸಿ, ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳ ಪಟ್ಟಿ ಹಾಗೂ ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಹೇಳಿದರು. ಪಂಚಾಯತ್ ವ್ಯಾಪ್ತಿಯ ಪ್ರತಿಯೊಂದು ಕಾಮಗಾರಿಯ ವಿವರಗಳನ್ನು ಗೋಡೆ ಬರಹದ ಮೂಲಕ ದಾಖಲಿಸಿರುವ ಬಗ್ಗೆಯೂ ಮಾಹಿತಿ ನೀಡಿದರು.
ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ಒಟ್ಟಾಗಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಸಂವಿಧಾನದ ಆಶಯಗಳನ್ನು ಸ್ಮರಿಸಿದರು. ಸಾಮಾಜಿಕ ಪರಿಶೋಧನಾ ಘಟಕದ ಸಿಬ್ಬಂದಿ ಯಮುನಾ ನಾಯ್ಕ, ಶಿಲ್ಪಾ ನಾಯ್ಕ, ಗ್ರಾಮ ಪಂಚಾಯತ್ ಸಿಬ್ಬಂದಿ ಸೀಮಾ ನಾಯ್ಕ, ಸವಿತಾ, ವಿಘ್ನೇಶ ಗೌಡ, ಮೋನಿಕಾ, ಸಾಂಜೂಜೆ ಪರಾಸ್ಕ ಲೋಫೀಸ್ ಹಾಗೂ ಬಿಎಫ್ಟಿ ಶ್ರೀಧರ ಪಟಗಾರ ಉಪಸ್ಥಿತರಿದ್ದರು.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಸರ್ಕಾರಿ ಶಾಲಾ ಮಕ್ಕಳ ಜ್ಞಾನಪ್ರತಿಭೆಗೆ ವೇದಿಕೆ: ಮಣ್ಕುಳಿಯಲ್ಲಿ ರಸಪ್ರಶ್ನೆ ಸ್ಪರ್ಧೆ



