ಭಟ್ಕಳ ಡೈರಿ ವರದಿ

ಭಟ್ಕಳ: ಮಾರಿಜಾತ್ರೆಯ ವೇಳೆ ಮಾರಿಯಮ್ಮನ ಮೆರವಣಿಗೆ ಹಾಗೂ ವಿಗ್ರಹ ವಿಸರ್ಜನೆ ಸಾಂಪ್ರದಾಯಿಕವಾಗಿ ನಡೆಯುತ್ತಿರುವ ಜಾಲಿಕೋಡಿಯ ವಿಸರ್ಜನಾ ಸ್ಥಳ ಮತ್ತು ಮಾರ್ಗವನ್ನು ಶ್ರೀ ಮಾರಿಕಾಂಬಾ ದೇವಸ್ಥಾನ ಟ್ರಸ್ಟ್ ಹೆಸರಿನಲ್ಲಿ ನೋಂದಾಯಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಸಲ್ಲಿಸಿದೆ. ಈ ಕುರಿತು ಗುರುವಾರ ಸಹಾಯಕ ಉಪನೋಂದಣಾಧಿಕಾರಿಗೆ ಹಾಗೂ ಭಟ್ಕಳ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ಜಾಲಿಕೋಡಿಯ ಸರ್ವೆ ನಂಬರ್ ೧೧೩, ೧೧೪ ಮತ್ತು ೧೧೫ರ ವ್ಯಾಪ್ತಿಯಲ್ಲಿರುವ ಜಾಗದಲ್ಲಿ ಅನಾದಿ ಕಾಲದಿಂದಲೂ ಮಾರಿಜಾತ್ರೆಯ ಮೆರವಣಿಗೆ ಹಾಗೂ ವಿಗ್ರಹ ವಿಸರ್ಜನೆ ನಡೆಯುತ್ತಾ ಬಂದಿದೆ. ಆದರೆ, ಈ ಜಾಗ ಇತ್ತೀಚೆಗೆ ಬೇರೆಯವರಿಗೆ ಮಾರಾಟವಾಗಿರುವುದು ದೇವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿಯೂ ಧಾರ್ಮಿಕ ಸಂಪ್ರದಾಯಕ್ಕೆ ಯಾವುದೇ ಅಡೆತಡೆಯಾಗದಂತೆ ವಿಸರ್ಜನಾ ಸ್ಥಳ ಮತ್ತು ಮಾರ್ಗವನ್ನು ದೇವಸ್ಥಾನದ ಹೆಸರಿಗೆ ನೋಂದಾಯಿಸಲು ಆಡಳಿತ ಮಂಡಳಿ ಮುಂದಾಗಿದೆ.

೪ ಗುಂಟೆ ಜಾಗ, ೧೬ ಅಡಿ ಅಗಲದ ರಸ್ತೆಗಾಗಿ ಮನವಿ:

ಜಾಗ ಖರೀದಿಸಿರುವ ವ್ಯಕ್ತಿಯ ಒಪ್ಪಿಗೆಯಂತೆ ವಿಗ್ರಹ ವಿಸರ್ಜನೆಗಾಗಿ ೪ ಗುಂಟೆ ಜಾಗವನ್ನು ಹಾಗೂ ವಿಸರ್ಜನಾ ಮಾರ್ಗಕ್ಕಾಗಿ ೧೬ ಅಡಿ ಅಗಲ ಮತ್ತು ಅಂದಾಜು ೧೦೦ ಮೀಟರ್ ಉದ್ದದ ರಸ್ತೆಯನ್ನು ಶ್ರೀ ಮಾರಿಕಾಂಬಾ ದೇವಸ್ಥಾನ ಟ್ರಸ್ಟ್, ಮುಖ್ಯ ರಸ್ತೆ, ಭಟ್ಕಳ ಎಂಬ ಹೆಸರಿನಲ್ಲಿ ನೋಂದಾಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಕೋರಲಾಗಿದೆ.

ಮಳೆನೀರು ಕಾಲುವೆಯ ಸ್ಥಿತಿಗತಿ ಪರಿಶೀಲನೆಗೆ ಆಗ್ರಹ: ವಿಸರ್ಜನಾ ಮಾರ್ಗದ ಪಕ್ಕದಲ್ಲಿ ಮಳೆನೀರು ಹರಿದುಹೋಗಲು ದೊಡ್ಡ ಕಾಲುವೆ ಇರುವುದರಿಂದ, ಅದರ ಸ್ಥಿತಿಗತಿ ಹಾಗೂ ಮಾರ್ಗದ ಬಳಕೆಗೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸುವಂತೆಯೂ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮತ್ತು ಮಾರಿಜಾತ್ರೆಯ ಮೆರವಣಿಗೆಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ವಿಸರ್ಜನಾ ಸ್ಥಳ ಹಾಗೂ ಮಾರ್ಗವನ್ನು ಟ್ರಸ್ಟ್ ಹೆಸರಿಗೆ ನೋಂದಾಯಿಸುವ ಸಂದರ್ಭದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಸೂಕ್ತ ಸಹಕಾರ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಅಧಿಕಾರಿಗಳಿಗೆ ವಿನಂತಿಸಲಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಶ್ರೀಪಾದ ಕಂಚುಗಾರ, ಪ್ರೀತಮ್ ಶೇಟ, ಕೇಶವ ನಾಯ್ಕ, ಕೃಷ್ಣಾನಂದ ಮಹಾಲೆ, ದಿನೇಶ ನಾಯ್ಕ, ಸಂದೀಪ ಶೇಟ, ಮಾದೇವ ಮೊಗೇರ ಹಾಗೂ ಜೀವೋತ್ತಮ ಪೈ ಉಪಸ್ಥಿತರಿದ್ದರು.

ಇದನ್ನೂ ಓದಿ: 

ಉಚ್ಚಿಲ ದಸರಾ ವೇದಿಕೆಯಲ್ಲಿ ಭಟ್ಕಳದ ನಿನಾದ ಕಲ್ಚರಲ್ ಅಕಾಡೆಮಿಯ ಭಕ್ತಿಗಾನಾಮೃತ; ಮಂತ್ರಮುಗ್ಧರಾದ ಭಕ್ತರು

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಹೆಮ್ಮೆ: ಬಿ.ಕಾಂನಲ್ಲಿ ಪ್ರಥಮ ರ‍್ಯಾಂಕ್, ಬಿಬಿಎಯಲ್ಲಿ ಐದನೇ ರ‍್ಯಾಂಕ್