ಭಟ್ಕಳ ಡೈರಿ ವರದಿ

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಚ್ಚಿಲ ದಸರಾ ಮಹೋತ್ಸವದ ಆರನೇ ದಿನವಾದ ಅಕ್ಟೋಬರ್ ೧೬ರಂದು, ಭಟ್ಕಳದ ನಿನಾದ ಕಲ್ಚರಲ್ ಅಕಾಡೆಮಿ ತಂಡವು ಪ್ರಸ್ತುತಪಡಿಸಿದ ಭಕ್ತಿಗಾನಾಮೃತ ಕಾರ್ಯಕ್ರಮ ಭಕ್ತರನ್ನು ಮಂತ್ರಮುಗ್ಧಗೊಳಿಸಿತು.

ರಾಜ್ಯ ಪ್ರಶಸ್ತಿ ಪುರಸ್ಕೃತ ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಭಕ್ತಿ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ಸುಂದರ ಸಂಗಮವಾಗಿ ಮೂಡಿಬಂತು. ಸತತ ಮೂರೂವರೆ ಗಂಟೆಗಳ ಕಾಲ ನಡೆದ ಗಾಯನ ಕಾರ್ಯಕ್ರಮದಲ್ಲಿ ಕಲಾವಿದರು ತಮ್ಮ ಭಾವಪೂರ್ಣ ಗಾಯನದ ಮೂಲಕ ನೆರೆದಿದ್ದ ಭಕ್ತರ ಮನ ಗೆದ್ದರು.

ಕಾರ್ಯಕ್ರಮದಲ್ಲಿ ಉಮೇಶ ಮುಂಡಳ್ಳಿ ಹಾಗೂ ಹಿರಿಯ ಕಲಾವಿದ ಉಮೇಶ ಶಿರೂರು ಅವರ ಗಾಯನ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ನಿನಾದ ಉಮೇಶ, ಉತ್ಥಾನ ಉಮೇಶ ಮತ್ತು ಸುದರ್ಶನ ಶಿರೂರು ಗಾಯನಕ್ಕೆ ಸಹಕರಿಸಿದರು. ಉಮೇಶ ಶಿರೂರು ಹಾರ್ಮೋನಿಯಂನಲ್ಲಿ, ಶ್ಯಾಮ್ ಶಿರೂರು ರಿದಂ ಪ್ಯಾಡ್‌ನಲ್ಲಿ ಹಾಗೂ ಸುಧಾಮ್ ಶಿರೂರು ತಬಲಾದಲ್ಲಿ ಸಾಥ್ ನೀಡಿದರು. ಗಾಯನ ಮತ್ತು ವಾದ್ಯಸಂಗೀತದ ಸಮನ್ವಯ ಭಕ್ತಿಗೀತೆಗಳಿಗೆ ವಿಶೇಷ ಮೆರುಗು ನೀಡಿತು. ದೇವಿಯ ಸನ್ನಿಧಿಯಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಕವಿ, ಗಾಯಕ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಉಮೇಶ ಮುಂಡಳ್ಳಿ, ಕಾರ್ಯಕ್ರಮದ ಮೇಲ್ವಿಚಾರಕ ದಿನೇಶ್ ಕೊಟ್ಯಾನ್ ಹಾಗೂ ಧರ್ಮದರ್ಶಿ ಮಂಡಳಿಯ ಹಿರಿಯ ಸದಸ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂತ್ಯದಲ್ಲಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮುಖ್ಯಸ್ಥರು ಉಮೇಶ ಮುಂಡಳ್ಳಿ ಸೇರಿದಂತೆ ನಿನಾದ ಕಲ್ಚರಲ್ ಅಕಾಡೆಮಿಯ ಎಲ್ಲ ಕಲಾವಿದರನ್ನು ಗೌರವಿಸಿ ಅಭಿನಂದಿಸಿದರು.

ಕರಾವಳಿಯ ಪ್ರಮುಖ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿರುವ ಉಚ್ಚಿಲ ದಸರಾ ಮಹೋತ್ಸವದಲ್ಲಿ ಭಕ್ತಿಗಾನಾಮೃತ ಕಾರ್ಯಕ್ರಮವು ಸಂಗೀತದ ಮೂಲಕ ಭಕ್ತಿಭಾವವನ್ನು ಹೆಚ್ಚಿಸುವುದರ ಜತೆಗೆ ನಿನಾದ ಕಲ್ಚರಲ್ ಅಕಾಡೆಮಿಯ ಸಾಂಸ್ಕೃತಿಕ ಕೊಡುಗೆಯನ್ನು ಪರಿಚಯಿಸಿತು

ಇದನ್ನೂ ಓದಿ :

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಹೆಮ್ಮೆ: ಬಿ.ಕಾಂನಲ್ಲಿ ಪ್ರಥಮ ರ‍್ಯಾಂಕ್, ಬಿಬಿಎಯಲ್ಲಿ ಐದನೇ ರ‍್ಯಾಂಕ್

ಭಟ್ಕಳದಲ್ಲಿ ಮಳೆ ಕೊರತೆ: ಕಡವಿನಕಟ್ಟೆ ಅಣೆಕಟ್ಟಿಗೆ ಒಳಹರಿವು ಇಳಿಕೆ; ಕುಡಿಯುವ ನೀರು, ಕೃಷಿ, ಜಾನುವಾರುಗಳಿಗೆ ಆತಂಕ