ಭಟ್ಕಳ ಡೈರಿ ವರದಿ

ಭಟ್ಕಳ: ರಾಷ್ಟ್ರೀಯ ಏಕತೆ ಹಾಗೂ ಮಾದಕವಸ್ತು ಮುಕ್ತ ಭಾರತದ ಸಂದೇಶ ಸಾರುವ ಉದ್ದೇಶದಿಂದ ತ್ರಿಪುರಾದ ಅಗರ್ತಲಾದಿಂದ ಗುಜರಾತ್‌ನ ಏಕತಾ ನಗರಕ್ಕೆ ತೆರಳುತ್ತಿರುವ ರಾಷ್ಟ್ರೀಯ ಪೊಲೀಸ್ ಮೋಟಾರ್‌ಸೈಕಲ್ ರ‍್ಯಾಲಿಗೆ ಭಟ್ಕಳದಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು.

ಭಟ್ಕಳ ಉಪವಿಭಾಗದ ಪೊಲೀಸ್ ಇಲಾಖೆಯ ವತಿಯಿಂದ ಸರ್ಪನಕಟ್ಟೆ ಪೊಲೀಸ್ ಚೆಕ್‌ಪೋಸ್ಟ್ ಬಳಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಸಿಬ್ಬಂದಿಯನ್ನು ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಡಿವೈಎಸ್ಪಿ ಎಸ್.ವಿ. ಗಿರೀಶ್, ಸಿಪಿಐ ದಿವಾಕರ ಪಿ.ಎಂ. ಹಾಗೂ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ವೆಂಕಟೇಶ್ ಎಸ್. ಮುರ್ನಾಲ್ ಉಪಸ್ಥಿತರಿದ್ದು, ರ‍್ಯಾಲಿಯ ಉದ್ದೇಶಕ್ಕೆ ಶುಭ ಹಾರೈಸಿದರು.

ಸರ್ಪನಕಟ್ಟೆಯಿಂದ ಆರಂಭವಾದ ರ‍್ಯಾಲಿಯು ಮೂಡಭಟ್ಕಳ ಬೈಪಾಸ್ ಮೂಲಕ ಪಟ್ಟಣ ಪ್ರವೇಶಿಸಿತು. ಬಳಿಕ ಮುರ್ಡೇಶ್ವರ ಮಾರ್ಗವಾಗಿ ಗೋಕರ್ಣದತ್ತ ಪ್ರಯಾಣ ಮುಂದುವರಿಸಿತು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾದ ಅಕ್ಟೋಬರ್ ೩೧ರಂದು ಗುಜರಾತ್‌ನ ಏಕತಾ ನಗರದಲ್ಲಿ ನಡೆಯಲಿರುವ ರಾಷ್ಟ್ರೀಯ ಏಕತಾ ಪರೇಡ್‌ನಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಈ ರ‍್ಯಾಲಿ ಸಂಚರಿಸುತ್ತಿದೆ. ಅಕ್ಟೋಬರ್ ೮ರಂದು ತ್ರಿಪುರಾದ ಅಗರ್ತಲಾದ ಎ.ಡಿ. ನಗರ ಪೊಲೀಸ್ ಲೈನ್ಸ್‌ನ ಮನೋರಮಾ ದೇಬಬರ್ಮಾ ಸ್ಮಾರಕ ಕ್ರೀಡಾಂಗಣದಲ್ಲಿ ರ‍್ಯಾಲಿಗೆ ಚಾಲನೆ ನೀಡಲಾಗಿತ್ತು.

ಸುಮಾರು ೨,೮೦೦ ಕಿ.ಮೀ. ದೂರ ಕ್ರಮಿಸಲಿರುವ ಈ ರ‍್ಯಾಲಿಯು ಹಲವು ರಾಜ್ಯಗಳ ಮೂಲಕ ಸಾಗುತ್ತಿದೆ. ವಿವಿಧ ರಾಜ್ಯಗಳ ಪೊಲೀಸ್ ಪಡೆಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಪೊಲೀಸ್ ಸಂಘಟನೆಗಳ ತಂಡಗಳು ಇದರಲ್ಲಿ ಭಾಗವಹಿಸುತ್ತಿವೆ.

‘ಮಾದಕವಸ್ತು ಮುಕ್ತ ಭಾರತ’ ಮತ್ತು ‘ಆಪರೇಷನ್ ತೂಫಾನ್’ ಅಭಿಯಾನಗಳ ಮೂಲಕ ಮಾದಕವಸ್ತುಗಳ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ರ‍್ಯಾಲಿಯ ಪ್ರಮುಖ ಉದ್ದೇಶವಾಗಿದೆ. ಇದರೊಂದಿಗೆ ರಾಷ್ಟ್ರೀಯ ಏಕತೆ, ಸಹೋದರತ್ವ ಹಾಗೂ ದೇಶದ ಸಮಗ್ರತೆಯ ಸಂದೇಶವನ್ನೂ ಜನರಿಗೆ ತಲುಪಿಸಲಾಗುತ್ತಿದೆ.

ಇದನ್ನೂ ಓದಿ :

ಕೆರೆಕೋಣ ಚೌಡೇಶ್ವರಿ ದೇವಸ್ಥಾನದಲ್ಲಿ ಭಕ್ತಿಸಂಗೀತ ಕಾರ್ಯಕ್ರಮ

ಭಟ್ಕಳ: ಆಟೋ ಬಾಡಿಗೆ ವಿಚಾರಕ್ಕೆ ಇಬ್ಬರ ನಡುವೆ ಹೊಡೆದಾಟ