ಭಟ್ಕಳ ಡೈರಿ ವರದಿ

ಭಟ್ಕಳ: ತಾಲೂಕಿನಲ್ಲಿ ಕಳೆದ ವಾರ ಸಾಧನೆಗಳ ಸಂಭ್ರಮ, ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣ, ರಾಜಕೀಯ ಆರೋಪ-ಪ್ರತ್ಯಾರೋಪ, ಸಾರ್ವಜನಿಕ ಸಮಸ್ಯೆಗಳು, ಪರಿಸರ ಆತಂಕ ಹಾಗೂ ಪೊಲೀಸ್ ಕಾರ್ಯಾಚರಣೆಗಳು ಸೇರಿದಂತೆ ಹಲವು ಬೆಳವಣಿಗೆಗಳು ಗಮನ ಸೆಳೆದಿವೆ. ಶಿಕ್ಷಣ, ಕ್ರೀಡೆ ಮತ್ತು ಸಾಮಾಜಿಕ ಸೇವೆಯಲ್ಲಿ ಸ್ಥಳೀಯರು ಹೆಮ್ಮೆ ಮೂಡಿಸಿದರೆ, ನೀರು ಪೋಲು, ಲಸಿಕೆ ಕೊರತೆ, ಗುಡ್ಡ ಅಗೆತ ಹಾಗೂ ಚಿರತೆ ದಾಳಿಯಂತಹ ಸಮಸ್ಯೆಗಳು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿವೆ.

ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ: ಕನ್ನಡ ಸಾಹಿತ್ಯ ಪರಿಷತ್ತು ರಾಜೋತ್ಸವ ಮಾಸದ ಅಂಗವಾಗಿ ಹಮ್ಮಿಕೊಂಡ ‘ಸಾಧಕರೆಡೆಗೆ ಸಾಹಿತ್ಯ ಪರಿಷತ್ತು’ ಕಾರ್ಯಕ್ರಮದಲ್ಲಿ ಭಟ್ಕಳದ ಇಬ್ಬರು ಸಾಧಕರನ್ನು ಗೌರವಿಸಿದೆ. ಇನ್ನೊಂದೆಡೆ, ಪ್ರತಿವರ್ಷ ರೈತರಿಗೆ ಉಚಿತ ಬಿತ್ತನೆ ಬೀಜ ವಿತರಿಸುವ ಮಾಸ್ತಪ್ಪ ನಾಯ್ಕ ಬಲಸೆ ಅವರು ಈ ಬಾರಿ ರೈತರಿಂದ ತಲಾ ಒಂದು ಪಿಂಡಿ ಒಣ ಹುಲ್ಲು ಸಂಗ್ರಹಿಸಿ ಬೈಲೂರು ಗ್ರಾಮದ ಶ್ರೀ ಗೋಪಾಲಕೃಷ್ಣ ಗೋಶಾಲೆಗೆ ವಿತರಿಸಿದ್ದಾರೆ. ಕೃಷಿಗೆ ಉತ್ತೇಜನ ನೀಡುವುದರ ಜೊತೆಗೆ ಗೋವುಗಳ ಮೇವಿನ ವ್ಯವಸ್ಥೆಗೆ ನೆರವಾಗಿರುವ ಈ ಕಾರ್ಯ ಸಾಮಾಜಿಕ ಕಾಳಜಿಯ ಮತ್ತೊಂದು ಮಾದರಿಯಾಗಿದೆ.

ಕ್ರೀಡಾ ಕ್ಷೇತ್ರದಲ್ಲಿ ಭಟ್ಕಳದ ವಿದ್ಯಾರ್ಥಿಗಳ ಮಿಂಚು: ಧಾರವಾಡದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾನಿಲಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಒಟ್ಟು ಎಂಟು ಪದಕಗಳನ್ನು ಗೆದ್ದಿದ್ದಾರೆ. ಸುಮಾರು ೭೩ ಕಾಲೇಜುಗಳ ಸ್ಪರ್ಧಿಗಳ ನಡುವೆ ಒಟ್ಟಾರೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಕಾಲೇಜಿನ ಕ್ರೀಡಾ ಸಾಧನೆಗೆ ಮತ್ತಷ್ಟು ಮೆರುಗು ನೀಡಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಕ್ರಿಕೆಟ್ ತಂಡಕ್ಕೆ ಭಟ್ಕಳ ತಾಲೂಕಿನ ಐವರು ಯುವ ಕ್ರಿಕೆಟಿಗರು ಆಯ್ಕೆಯಾಗಿರುವುದು ಕ್ರೀಡಾ ವಲಯದಲ್ಲಿ ಗಮನ ಸೆಳೆದಿದೆ.

ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಭೆಗೆ ಹಲವು ವೇದಿಕೆಗಳು: ಹೊನ್ನಾವರದಲ್ಲಿ ನಡೆದ ಜಿಲ್ಲಾಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯಲ್ಲಿ ಭಟ್ಕಳದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಾಲಿಯ ಶ್ರೀ ವೆಂಕಟೇಶ್ವರ ನಾಮಧಾರಿ ವಿದ್ಯಾವರ್ಧಕ ಸಭಾಭವನದಲ್ಲಿ ಬೆಳಕೆ ವಲಯ ಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿ ನಡೆಯಿತು. ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಭಟ್ಕಳ ತಾಲೂಕಿನ ಕೆಪಿಎಸ್ ತೆರ್ನಮಕ್ಕಿ ಶಾಲೆಯ ನಿಧಿ ಶ್ರೀಧರ ನಾಯ್ಕ ಮತ್ತು ಮಾನ್ವಿ ಕುಮಾರ ಗೌಡ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದಾರೆ.

ಸಿಂಚನಾ ನಾಯ್ಕ ಸಾಧನೆ: ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಿಂಚನಾ ಆರ್. ನಾಯ್ಕ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇದೇ ವಿದ್ಯಾರ್ಥಿನಿ ನವೆಂಬರ್ ೧೯ರಂದು ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಯುವ ಸಂಸತ್ ಕಾರ್ಯಕ್ರಮದಲ್ಲಿ ಗಮನಾರ್ಹವಾಗಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಎಐಟಿಎಂನಲ್ಲಿ ಹೊಸ ವಿದ್ಯಾರ್ಥಿಗಳಿಗೆ ‘ಇನಿಶಿಯಾ ೨೦೨೬’ : ಉನ್ನತ ಶಿಕ್ಷಣದ ಪಯಣ ಆರಂಭಿಸುವ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಗುರಿ ಮತ್ತು ವೃತ್ತಿಪರ ಬದುಕಿನ ದಿಕ್ಕು ತೋರಿಸುವ ಉದ್ದೇಶದಿಂದ ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್‌ಮೆಂಟ್ (ಎಐಟಿಎಂ)ನಲ್ಲಿ ‘ಇನಿಶಿಯಾ ೨೦೨೬’ ಓರಿಯಂಟೇಶನ್ ಕಾರ್ಯಕ್ರಮ ನಡೆಯಿತು. ಇದೇ ಸಂಸ್ಥೆಯ ಐಒಟಿ ಕ್ಲಬ್ ವತಿಯಿಂದ ತಾಂತ್ರಿಕ ಶಿಕ್ಷಣವನ್ನು ಪ್ರಾಯೋಗಿಕ ಅನುಭವದೊಂದಿಗೆ ಬೆಸೆಯುವ ಉದ್ದೇಶದಿಂದ ‘ಆರ್ಡುಯಿನೊ ಕಿಕ್‌ಸ್ಟಾರ್ಟ್’ ಕಾರ್ಯಾಗಾರವೂ ಆಯೋಜಿಸಲಾಯಿತು.

ಕ್ಷೇತ್ರದಲ್ಲಿ ಅಭಿವೃದ್ಧಿ ಕೊರತೆ; ಬಿಜೆಪಿ ಮುಖಂಡರ ಆರೋಪ: ಭಟ್ಕಳ ಕ್ಷೇತ್ರದಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಅಧಿಕಾರ ದುರುಪಯೋಗ ಮತ್ತು ದಬ್ಬಾಳಿಕೆ ನಡೆಯುತ್ತಿದೆ ಹಾಗೂ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂದು ಬಿಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಗುಡ್ಡ ಅಗೆತದಿಂದ ಆತಂಕ: ಮಾವಿನಕುರ್ವೆ ವ್ಯಾಪ್ತಿಯ ಗೊಂಡರಕೇರಿಯಲ್ಲಿ ಕೃಷಿ ಭೂಮಿ ಸಮತಟ್ಟು ಮಾಡುವ ನೆಪದಲ್ಲಿ ಗುಡ್ಡವನ್ನು ಲಂಬವಾಗಿ ಅಗೆದು ಮಣ್ಣು ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಕಂಡೆಕೊಡ್ಲಿನಲ್ಲಿ ಚಿರತೆ ದಾಳಿ; ಬೋನಿನ ವ್ಯವಸ್ಥೆಯೂ ಚರ್ಚೆಗೆ: ತಾಲೂಕಿನ ಕಂಡೆಕೊಡ್ಲು ಪ್ರದೇಶದಲ್ಲಿ ಮುಂಜಾನೆ ಚಿರತೆಯ ದಾಳಿಗೆ ಜಾನುವಾರುಗಳು ಬಲಿಯಾಗಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಚಿರತೆ ಹಿಡಿಯಲು ಅರಣ್ಯ ಇಲಾಖೆ ಬೋನು ಇರಿಸಿದ್ದರೂ, ಬೋನಿನಲ್ಲಿ ಆಹಾರವೇ ಇಲ್ಲದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದಲ್ಲಿ ನೀರು ಪೋಲು: ಭಟ್ಕಳ ನಗರಸಭೆ ವ್ಯಾಪ್ತಿಯ ಹಳೆಯ ತಹಶೀಲ್ದಾರ್ ಕಚೇರಿ ಸಮೀಪದಿಂದ ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಅಪಾರ ಪ್ರಮಾಣದ ನೀರು ರಸ್ತೆಯಲ್ಲಿ ಹರಿದು ಪೋಲಾಗುತ್ತಿರುವ ಘಟನೆ ಸಾರ್ವಜನಿಕರ ಗಮನ ಸೆಳೆದಿದೆ. ನಿರಂತರವಾಗಿ ನೀರು ಹರಿಯುತ್ತಿದ್ದರೂ ತಕ್ಷಣದ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಕೊರತೆ:  ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಮಕ್ಕಳ ಲಸಿಕೆ ಹಾಗೂ ರೋಟಾ ಲಸಿಕೆ ಲಭ್ಯವಿಲ್ಲದಿರುವುದರಿಂದ ಪೋಷಕರು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಕ್ಷಣ ಲಸಿಕೆ ಪೂರೈಕೆ ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ಸಲ್ಲಿಸಲಾಗಿದ್ದು, ಮಕ್ಕಳ ಲಸಿಕಾ ಕಾರ್ಯಕ್ರಮಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿದೆ.

ಹಲವು ಪ್ರಕರಣಗಳು ದಾಖಲು: ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ಭಟ್ಕಳದ ಮುಗ್ದುಂ ಕಾಲೋನಿಗೆ ತೆರಳಿದ್ದ ಪೊಲೀಸರ ಕೈಗೆ ಸಿಗದೆ ಆರೋಪಿಯೊಬ್ಬ ಪರಾರಿಯಾಗಿದ್ದಾನೆ. ಮೂಸಾನಗರದ ನಾಲ್ಕನೇ ಕ್ರಾಸ್‌ನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಟ್ಟಿ ಹಾಕಿರುವ ಮಾಹಿತಿ ಮೇರೆಗೆ ಭಟ್ಕಳ ಶಹರ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು ₹೭೦ ಸಾವಿರ ಮೌಲ್ಯದ ಮೂರು ಹೋರಿಗಳನ್ನು ರಕ್ಷಿಸಿದ್ದಾರೆ. ಹೆಬಳೆ ಗ್ರಾಮದ ಗಾಂಧಿನಗರ ಸರ್ಕಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಓಸಿ ಜುಗಾರಾಟ ನಡೆಸುತ್ತಿದ್ದ ಆರೋಪದಡಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಪ್ರದೇಶದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಜೂಜಾಟದ ಆರೋಪದಡಿ ಪೊಲೀಸರು ವಶಕ್ಕೆ ಪಡೆದಿರುವ ವರದಿಯೂ ಬಂದಿದೆ. ಭಟ್ಕಳ ಶಹರ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ನಗದು ಹಾಗೂ ಜೂಜಾಟದ ಪರಿಕರಗಳನ್ನು ಜಪ್ತಿ ಮಾಡಿದ್ದಾರೆ.

ಮುರುಡೇಶ್ವರ ಭಾಗದಲ್ಲಿ ರಾತ್ರಿ ಗಸ್ತು ಹೆಚ್ಚಳ: ಮುರುಡೇಶ್ವರ ಸಮೀಪದ ಕೈಕಿಣಿ ಹೆರಾಡಿ ಪ್ರದೇಶದಲ್ಲಿ ಮಧ್ಯರಾತ್ರಿ ಮನೆ ಬಾಗಿಲು ತಟ್ಟುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅಪರಿಚಿತರ ಗುಂಪಿನ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುರುಡೇಶ್ವರ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಿದ್ದಾರೆ.

ರಸ್ತೆ ಅಪಘಾತಗಳು: ಮುರುಡೇಶ್ವರದ ಕನ್ನಡ ಶಾಲೆಯ ಕಂಪರ್ಟ್ ಲಾಡ್ಜ್ ಸಮೀಪ ರಸ್ತೆಗೆ ಅಡ್ಡಲಾಗಿ ನಾಯಿ ಬಂದ ಪರಿಣಾಮ ಸ್ಕೂಟಿಯನ್ನು ಏಕಾಏಕಿ ತಿರುಗಿಸಿದಾಗ ಮತ್ತೊಂದು ಸ್ಕೂಟಿಗೆ ಡಿಕ್ಕಿ ಸಂಭವಿಸಿ ಸವಾರ ಗಾಯಗೊಂಡ ಘಟನೆ ವರದಿಯಾಗಿದೆ. ಜಾಲಿಕೋಡಿ ಇಳಿಜಾರಿನ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಲಾದ ಆಟೋರಿಕ್ಷಾ ಪಲ್ಟಿಯಾಗಿ ನವೆಂಬರ್ ೧೬ರಂದು ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಮಾರುಕೇರಿ ಸಮೀಪದ ಮರಂಬಳ್ಳಿ ಕ್ರಾಸ್ ಬಳಿ ರಾಜ್ಯ ಹೆದ್ದಾರಿ-೫೦ರಲ್ಲಿ ಬೈಕ್ ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತದಲ್ಲಿ ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಕೂಡ ವರದಿಯಾಗಿದೆ.

ದೇವಿನಗರ ರುದ್ರಭೂಮಿ ಸ್ವಚ್ಛತೆ: ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ದೇವಿನಗರದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಶವಸಂಸ್ಕಾರಕ್ಕೆ ಅನುಕೂಲವಾಗುವಂತೆ ಸಿದ್ಧತೆ ಮಾಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕ ಸೌಲಭ್ಯಗಳ ನಿರ್ವಹಣೆಗೆ ಕೈಗೊಂಡ ಈ ಕ್ರಮ ಗಮನ ಸೆಳೆದಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಭಟ್ಕಳದ ಇಬ್ಬರು ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ

ಭಟ್ಕಳದ ಮುಗ್ದುಂ ಕಾಲೋನಿಯಲ್ಲಿ ವಾರಂಟ್ ಜಾರಿಗೊಳಿಸಲು ತೆರಳಿದ ಪೊಲೀಸರಿಗೆ ಅಡ್ಡಿಪಡಿಸಿ ಆರೋಪಿ ಪರಾರಿ