ಭಟ್ಕಳ ಡೈರಿ ವರದಿ

ಭಟ್ಕಳ: ಸಾಗರ ತಾಲೂಕಿನ ಮೂಲದ, ಭಟ್ಕಳದ ಅಳಿಯ, ಕನ್ನಡಿಗ ಐಎಫ್‌ಎಸ್ ಅಧಿಕಾರಿ ಎ.ಟಿ. ದಾಮೋದರ ನಾಯ್ಕ ಅವರ ನೇತೃತ್ವದಲ್ಲಿ ಅರುಣಾಚಲ ಪ್ರದೇಶದಲ್ಲಿ ರಚಿಸಲಾದ ಹುಲಿ ಸಂರಕ್ಷಣಾ ಕಮಾಂಡೋ ಪಡೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಇಟಾನಗರದಲ್ಲಿ ಉದ್ಘಾಟಿಸಿದ್ದಾರೆ. ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯಾಗಿರುವ ಈ ಕಾರ್ಯಪಡೆಯ ರಚನೆಯಲ್ಲಿ ಕನ್ನಡಿಗ ಅಧಿಕಾರಿಯೊಬ್ಬರು ಪ್ರಮುಖ ಪಾತ್ರ ವಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಭಾರತ ಸರ್ಕಾರದ ಹುಲಿ ಸಂರಕ್ಷಣಾ ಪ್ರಾಧಿಕಾರದ ಅನುಮತಿ, ಪ್ರಾಯೋಜಕತ್ವ ಮತ್ತು ನಿರ್ದೇಶನದಡಿ ಈ ವಿಶೇಷ ಕಾರ್ಯಪಡೆಯನ್ನು ರಚಿಸುವ ಜವಾಬ್ದಾರಿಯನ್ನು ಅರುಣಾಚಲ ಪ್ರದೇಶ ಸರ್ಕಾರವು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ದಾಮೋದರ ನಾಯ್ಕ ಅವರಿಗೆ ವಹಿಸಿತ್ತು. ನಾಲ್ಕು ವರ್ಷಗಳ ಪರಿಶ್ರಮದ ಫಲವಾಗಿ ಅವರು ಈ ವಿಶೇಷ ಹುಲಿ ಸಂರಕ್ಷಣಾ ಕಮಾಂಡೋ ಪಡೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಗಡಿ ಪ್ರದೇಶದಲ್ಲಿ ಹುಲಿ ಬೇಟೆಗಾರರ ವಿರುದ್ಧ ಕಾರ್ಯಾಚರಣೆ: ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯ ಹಿಮಪರ್ವತ ಪ್ರದೇಶಗಳಲ್ಲಿ ನಿರಂತರವಾಗಿ ಹುಲಿ ಬೇಟೆ ನಡೆಯುತ್ತಿದ್ದ ಪ್ರಕರಣಗಳನ್ನು ಪತ್ತೆಹಚ್ಚಿ ಬೇಟೆಗಾರರನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ದಾಮೋದರ ನಾಯ್ಕ ಪ್ರಮುಖ ಪಾತ್ರ ವಹಿಸಿದ್ದರು.

ಜುಲೈ ೨೦೨೨ರಿಂದ ಈ ಅಕ್ರಮ ಚಟುವಟಿಕೆಗಳ ವಿರುದ್ಧ ಕಾರ್ಯನಿರ್ವಹಿಸಿದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ಅವರು ಸೇವೆ ಸಲ್ಲಿಸಿದ್ದರು. ಈ ಕಾರ್ಯಾಚರಣೆಯ ಅನುಭವ ಮತ್ತು ವನ್ಯಜೀವಿ ಸಂರಕ್ಷಣೆಯ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಕಮಾಂಡೋ ಪಡೆಯ ರಚನೆಗೆ ಅವರು ಶ್ರಮಿಸಿದ್ದಾರೆ.

ಲಕ್ಷದ್ವೀಪದಲ್ಲೂ ಗಮನಾರ್ಹ ಸೇವೆ: ದಾಮೋದರ ನಾಯ್ಕ ಅವರು ಲಕ್ಷದ್ವೀಪದಲ್ಲಿ ಐದು ವರ್ಷಗಳ ಕಾಲ ಪ್ರಧಾನ ಮುಖ್ಯ ವನ್ಯಜೀವಿ ಪರಿಪಾಲಕರಾಗಿ ಹಾಗೂ ಒಂಭತ್ತು ವಿವಿಧ ವಿಭಾಗಗಳ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿ ಸಮುದ್ರೀಯ ಪ್ರವಾಸೋದ್ಯಮ ಮತ್ತು ವಾಣಿಜ್ಯ ಮೀನುಗಾರಿಕೆ ಸಂಪತ್ತನ್ನು ವಿಶ್ವಮಟ್ಟದ ಮಾರುಕಟ್ಟೆಗೆ ಪರಿಚಯಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದರು. ಈ ಪ್ರಯತ್ನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚುಗೆಗೂ ಪಾತ್ರರಾಗಿದ್ದರು. ಜುಲೈ ೨೦೨೨ರಿಂದ ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಾಮೋದರ ನಾಯ್ಕ ಅವರ ಈ ಸಾಧನೆ ಭಟ್ಕಳದ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

world conference/ ವಿಶ್ವ ಸಂಸ್ಥೆಯ ಸಮ್ಮೇಳನಕ್ಕೆ ಸಾಗರದ ಕುವರ

ಭಟ್ಕಳದ ಶ್ರೀಗುರು ಸುಧೀಂದ್ರ ಕಾಲೇಜಿಗೆ ಸಿಎ ಪರೀಕ್ಷೆಯಲ್ಲಿ ಹೆಮ್ಮೆ ತಂದ ವಿದ್ಯಾರ್ಥಿಗಳು