ಭಟ್ಕಳ ಡೈರಿ ವರದಿ

ಭಟ್ಕಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀನು ಸಾಗಾಟ ವಾಹನಗಳಿಂದ ಮೀನಿನ ದುರ್ವಾಸನೆಯ ಕೊಳಕು ನೀರು ರಸ್ತೆಗೆ ಚೆಲ್ಲುತ್ತಾ ಸಾಗುತ್ತಿರುವ ಘಟನೆಗಳು ವಾಹನ ಸವಾರರಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತಿವೆ. ಇಂತಹ ನಿರ್ಲಕ್ಷ್ಯದ ವಿರುದ್ಧ ಪ್ರಶ್ನಿಸಿದ ಮಾಜಿ ಸೈನಿಕರೊಬ್ಬರಿಗೆ ವಾಹನ ಚಾಲಕ ಬೆದರಿಕೆ ಹಾಕಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಭಟ್ಕಳದ ಗುಳ್ಮಿ ಕ್ರಾಸ್ ಬಳಿ ಶುಕ್ರವಾರ ಮಧ್ಯಾಹ್ನ ಸುಮಾರು ೧೨.೦೫ರ ವೇಳೆಗೆ ಈ ಘಟನೆ ನಡೆದಿದೆ. ಕೆಎ ೨೦ ಎಬಿ ೪೮೨೫ ನೋಂದಣಿ ಸಂಖ್ಯೆಯ ಮೀನು ಸಾಗಾಟ ವಾಹನದಿಂದ ದುರ್ವಾಸನೆ ಬೀರುವ ಕೊಳಕು ನೀರು ರಸ್ತೆಯ ಮೇಲೆ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ಮಾಜಿ ಸೈನಿಕ, ಬಿಜೆಪಿ ಮುಖಂಡ ಶ್ರೀಕಾಂತ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೀನಿನ ಶೇಖರಣೆಯಿಂದ ಹೊರಬರುವ ಕೊಳಕು ನೀರನ್ನು ವಾಹನದಲ್ಲೇ ಸಮರ್ಪಕವಾಗಿ ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಳ್ಳದೆ ರಸ್ತೆಗೆ ಚೆಲ್ಲುತ್ತಾ ಸಾಗುವುದರಿಂದ ಹಿಂಬದಿಯಲ್ಲಿ ಸಂಚರಿಸುವ ವಾಹನ ಸವಾರರು ಮೂಗು ಮುಚ್ಚಿಕೊಂಡು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ವಾಹನ ಚಾಲಕನಿಗೆ ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸಿ ನೀರು ಸೋರಿಕೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದಾಗ, ಕಾರಿನ ಮೇಲೆಯೇ ವಾಹನ ಹರಿಸುವುದಾಗಿ ಬೆದರಿಕೆ ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಶ್ರೀಕಾಂತ ನಾಯ್ಕ ಆರೋಪಿಸಿದ್ದಾರೆ. ಸಾರ್ವಜನಿಕರು ಪ್ರಶ್ನಿಸಲು ಮುಂದಾದಾಗ, ಯಾರಿಗೆ ಬೇಕಾದರೂ ದೂರು ನೀಡಿ ಎಂದು ಹೇಳಿ ಚಾಲಕ ಅಲ್ಲಿಂದ ತೆರಳಿದ್ದಾನೆ ಎನ್ನಲಾಗಿದೆ.

ಪೊಲೀಸರಿಗೆ ವಿಡಿಯೋ ಸಹಿತ ದೂರು: ಘಟನೆಯ ವಾಹನದ ನೋಂದಣಿ ಸಂಖ್ಯೆ ಹಾಗೂ ವಿಡಿಯೋವನ್ನು ಭಟ್ಕಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರಿಗೆ ಕಳುಹಿಸಿ ಮಾಹಿತಿ ನೀಡಿರುವುದಾಗಿ ಶ್ರೀಕಾಂತ ನಾಯ್ಕ ತಿಳಿಸಿದ್ದಾರೆ.

ಮೀನು ಸಾಗಾಟ ವಾಹನಗಳಿಂದ ರಸ್ತೆಗೆ ಕೊಳಕು ನೀರು ಸೋರಿಕೆಯಾಗುವ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದೆ. ಈ ಹಿಂದೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಗಮನಕ್ಕೂ ತರಲಾಗಿದ್ದು, ವಾಹನ ಮಾಲೀಕರಿಂದ ಮುಚ್ಚಳಿಕೆ ಪಡೆಯುವ ಕ್ರಮವೂ ಕೈಗೊಳ್ಳಲಾಗಿತ್ತು ಎನ್ನಲಾಗಿದೆ. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನ.

ಗಡಿ ದಾಟಿದ ಬಳಿಕ ನಿಯಮಗಳ ಪಾಲನೆ ಏಕೆ ಇಲ್ಲ?: ಗೋವಾ ರಾಜ್ಯದಲ್ಲಿ ಮೀನು ಸಾಗಾಟ ವಾಹನಗಳು ನೀರು ಸೋರಿಕೆಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತವೆ. ಆದರೆ ಕರ್ನಾಟಕದ ಗಡಿ ಪ್ರವೇಶಿಸಿದ ಬಳಿಕ ಇಂತಹ ನಿರ್ಲಕ್ಷ್ಯ ಕಂಡುಬರುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಮೀನು ಸಾಗಾಟದ ವೇಳೆ ಕೊಳಕು ನೀರು ರಸ್ತೆಗೆ ಹರಿಯದಂತೆ ಕಡ್ಡಾಯ ವ್ಯವಸ್ಥೆ ಕಲ್ಪಿಸುವುದು ವಾಹನ ಮಾಲೀಕರ ಜವಾಬ್ದಾರಿಯಾಗಿದೆ. ಆದರೆ ಈ ನಿಯಮ ಪಾಲನೆಯಾಗದಿರುವುದು ರಾಷ್ಟ್ರೀಯ ಹೆದ್ದಾರಿಯ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

ಸಾರ್ವಜನಿಕರ ಆಗ್ರಹವೇನು?:

– ಚೆಕ್‌ಪೋಸ್ಟ್‌ಗಳಲ್ಲಿ ಮೀನು ಸಾಗಾಟ ವಾಹನಗಳ ಕಡ್ಡಾಯ ತಪಾಸಣೆ ನಡೆಸಬೇಕು.

– ವಾಹನಗಳಿಂದ ನೀರು ಸೋರಿಕೆಯಾಗದಂತೆ ಸೂಕ್ತ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.

– ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸಬೇಕು.

– ಪದೇಪದೇ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು.

ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಅವರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರು ನೆಮ್ಮದಿಯಿಂದ ಸಂಚರಿಸುವ ಹಕ್ಕನ್ನು ಕಾಪಾಡುವುದು ಆಡಳಿತದ ಜವಾಬ್ದಾರಿ. ಮೀನು ಸಾಗಾಟದ ಹೆಸರಿನಲ್ಲಿ ರಸ್ತೆಯನ್ನು ಕೊಳಕು ನೀರಿನಿಂದ ಮಲಿನಗೊಳಿಸುವುದಕ್ಕೆ ಕೊನೆಗೂ ಕಡಿವಾಣ ಬೀಳುವುದೇ ಎಂಬುದು ಈಗ ಸಾರ್ವಜನಿಕರ ಪ್ರಶ್ನೆಯಾಗಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಮಂಕಿ ಬಳಿ ಸ್ಕೂಟಿಗೆ ಡಿಕ್ಕಿ: ಮುರುಡೇಶ್ವರದ ಬೈಕ್ ಸವಾರನ ವಿರುದ್ಧ ದೂರು 

ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ, ಇಲ್ಲವಾದರೆ ಚುನಾವಣೆಯಲ್ಲಿ ಉತ್ತರ: ಶಿವಾನಿ ಭಟ್ಕಳ