ಭಟ್ಕಳ ಡೈರಿ ವರದಿ

ಭಟ್ಕಳ: ಕ್ರೀಡಾ ಅಖಾಡದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯ ಸಂಭ್ರಮ, ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸ್ಥಳೀಯ ಪ್ರತಿಭೆಗಳ ಸಾಧನೆ, ಸಾರ್ವಜನಿಕ ಆರೋಗ್ಯದ ಬಗ್ಗೆ ಆತಂಕ, ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀನು ಸಾಗಾಟ ವಾಹನಗಳ ಅವಾಂತರ, ಕಾಡುಪ್ರಾಣಿಗಳ ಸಂಚಾರದಿಂದ ಎದುರಾದ ಅಪಾಯ… ಹೀಗೆ ಭಟ್ಕಳ ತಾಲೂಕಿನಲ್ಲಿ ಕಳೆದ ವಾರ ಹಲವು ಪ್ರಮುಖ ಘಟನೆಗಳು ಗಮನ ಸೆಳೆದಿವೆ.

ಒಂದೆಡೆ ಭಟ್ಕಳದ ಯುವ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆಯ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದರೆ, ಮತ್ತೊಂದೆಡೆ ಸಾರ್ವಜನಿಕ ಸಮಸ್ಯೆಗಳು ಆಡಳಿತ ವ್ಯವಸ್ಥೆಯ ಗಮನ ಸೆಳೆಯುವಂತಾಗಿವೆ. ಕಳೆದ ವಾರದ ಪ್ರಮುಖ ವಿದ್ಯಮಾನಗಳ ಸಮಗ್ರ ಅವಲೋಕನ ಇಲ್ಲಿದೆ.

ಕ್ರೀಡಾ ಅಖಾಡದಲ್ಲಿ ರಾಜ್ಯಮಟ್ಟದ ಕಬಡ್ಡಿ ಸಂಭ್ರಮ: ಭಟ್ಕಳದ ಐಸ್ ಫ್ಯಾಕ್ಟರಿ ಸಮೀಪದ ಕೆ.ಪಿ. ಮೈದಾನದಲ್ಲಿ ನವೆಂಬರ್ ೨೭ರಿಂದ ೨೯ರವರೆಗೆ ರಾಜ್ಯಮಟ್ಟದ ‘ಬೀನಾ ವೈದ್ಯ ಗಂಡಭೇರುಂಡ’ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಹೊನಲು ಬೆಳಕಿನಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿ ರಾಜ್ಯದ ಪ್ರತಿಭಾವಂತ ಕಬಡ್ಡಿ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆಯಾಗಿದೆ. ಸ್ಥಳೀಯ ಕ್ರೀಡಾಭಿಮಾನಿಗಳಲ್ಲಿಯೂ ಪಂದ್ಯಾವಳಿ ವಿಶೇಷ ಆಸಕ್ತಿ ಮೂಡಿಸಿದೆ.

ಆಹಾರ ಸುರಕ್ಷತಾ ಅಧಿಕಾರಿ ಇಲ್ಲದೆ ಸಾರ್ವಜನಿಕರ ಆರೋಗ್ಯಕ್ಕೆ ಆತಂಕ: ನೂರಾರು ಹೋಟೆಲ್‌ಗಳು, ಬೇಕರಿಗಳು, ಮೀನು-ಮಾಂಸ ಮಾರಾಟ ಮಳಿಗೆಗಳು ಹಾಗೂ ಬೀದಿಬದಿ ಆಹಾರ ಕೇಂದ್ರಗಳನ್ನು ಹೊಂದಿರುವ ಭಟ್ಕಳ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಆಹಾರ ಸುರಕ್ಷತಾ ಅಧಿಕಾರಿ ಹುದ್ದೆ ಖಾಲಿ ಉಳಿದಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ. ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯ ಮೇಲೆ ನಿಗಾ ವಹಿಸಬೇಕಾದ ಅಧಿಕಾರಿಯೇ ಇಲ್ಲದಿರುವುದರಿಂದ ಸಾರ್ವಜನಿಕ ಆರೋಗ್ಯದ ಬಗ್ಗೆ ಆತಂಕ ವ್ಯಕ್ತವಾಗಿದೆ.

ತಕ್ಷಣ ಆಹಾರ ಸುರಕ್ಷತಾ ಅಧಿಕಾರಿಯನ್ನು ನೇಮಕ ಮಾಡುವಂತೆ ಆಗ್ರಹಿಸಿ, ಭಟ್ಕಳ ತಾಲೂಕು ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಅಧ್ಯಕ್ಷ ನಾಗೇಂದ್ರ ಶಂಕರ ನಾಯ್ಕ ಜಿಲ್ಲಾಧಿಕಾರಿ ಭೋಯರ್ ಹರ್ಷಲ್ ನಾರಾಯಣರಾವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀನು ಸಾಗಾಟ ವಾಹನಗಳ ಅವಾಂತರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀನು ಸಾಗಾಟ ವಾಹನಗಳಿಂದ ದುರ್ವಾಸನೆಯ ಕೊಳಕು ನೀರು ರಸ್ತೆಗೆ ಚೆಲ್ಲುತ್ತಾ ಸಾಗುತ್ತಿರುವ ಘಟನೆಗಳು ವಾಹನ ಸವಾರರಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತಿವೆ. ಈ ಅವ್ಯವಸ್ಥೆಯನ್ನು ಪ್ರಶ್ನಿಸಿದ ಮಾಜಿ ಸೈನಿಕರೊಬ್ಬರಿಗೆ ವಾಹನ ಚಾಲಕ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಕಂದಾಯ ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ: ಕರ್ನಾಟಕ ರಾಜ್ಯ ಕಂದಾಯ ನೌಕರರ ಸಂಘದ ಭಟ್ಕಳ ಶಾಖೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಬುಧವಾರ ಭಟ್ಕಳ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಥ್ಲೆಟಿಕ್ಸ್‌ನಲ್ಲಿ ಗುರು ಸುಧೀಂದ್ರ ಕಾಲೇಜಿನ ಕ್ರೀಡಾಪಟುಗಳ ಸಾಧನೆ: ಧಾರವಾಡದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ-ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ–೨೦೨೬ರಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿವಿಧ ಅಥ್ಲೆಟಿಕ್ಸ್ ವಿಭಾಗಗಳ ವೈಯಕ್ತಿಕ ಹಾಗೂ ತಂಡ ಸ್ಪರ್ಧೆಗಳಲ್ಲಿ ಪದಕ ಮತ್ತು ಪ್ರಶಸ್ತಿಗಳನ್ನು ಗಳಿಸುವ ಮೂಲಕ ಕಾಲೇಜು ಹಾಗೂ ಭಟ್ಕಳದ ಗೌರವ ಹೆಚ್ಚಿಸಿದ್ದಾರೆ.

ಪರಿಸರ ಸಂರಕ್ಷಣಾ ಸಂಶೋಧನೆಗೆ ಚಂದನಶ್ರೀಗೆ ಪಿಎಚ್.ಡಿ.: ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಸಂಶೋಧನೆ ನಡೆಸಿರುವ ಡಾ. ಎನ್. ಎಸ್. ಚಂದನಶ್ರೀ ಅವರು ಬೆಂಗಳೂರಿನ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್‌ನಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸ್ಥಳೀಯ ಪ್ರತಿಭೆಯ ಈ ಶೈಕ್ಷಣಿಕ ಸಾಧನೆ ಭಟ್ಕಳದ ಶೈಕ್ಷಣಿಕ ವಲಯದಲ್ಲಿ ಸಂತಸ ಮೂಡಿಸಿದೆ.

ಸಮಾಜಸೇವಕ ಸುರೇಶ ಬಸವ ಖಾರ್ವಿಗೆ ಎರಡು ರಾಜ್ಯಮಟ್ಟದ ಪ್ರಶಸ್ತಿ: ಮಾವಿನಕುರ್ವೆಯ ಸುರೇಶ ಬಸವ ಖಾರ್ವಿ ಅವರಿಗೆ ಎರಡು ಪ್ರತಿಷ್ಠಿತ ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಿವೆ. ಮೀನುಗಾರಿಕೆ ವೃತ್ತಿಯ ಜೊತೆಗೆ ಜೀವ ರಕ್ಷಕ ಮುಳುಗು ತಜ್ಞರಾಗಿ, ರಕ್ತದಾನ ಚಳವಳಿ ಹಾಗೂ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ಭಟ್ಕಳಕ್ಕೆ ಗೋ ಸಮ್ಮಾನ ರಥಯಾತ್ರೆ ಆಗಮನ: ಗೋ ಸಂರಕ್ಷಣೆ ಮತ್ತು ಗೋವಿನ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹೊರಟಿರುವ ಗೋ ಸಮ್ಮಾನ ರಥಯಾತ್ರೆ ಬುಧವಾರ ಭಟ್ಕಳ ತಾಲೂಕಿಗೆ ಆಗಮಿಸಿತು. ಬೆಳಿಗ್ಗೆ ೧೦ ಗಂಟೆಗೆ ಮುರ್ಡೇಶ್ವರ ಮಹಾದ್ವಾರದಲ್ಲಿ ರಥವನ್ನು ಸ್ವಾಗತಿಸಲಾಯಿತು. ಬಳಿಕ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ರಥಯಾತ್ರೆ ಸಂಚರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹುಯ್ಲಮಡಿ ರಸ್ತೆಯಲ್ಲಿ ವಾಹನ ಡಿಕ್ಕಿಗೆ ಚಿರತೆ ಬಲಿ: ತಾಲೂಕಿನ ಸರ್ಪನಕಟ್ಟೆ ಸಮೀಪದ ಹುಯ್ಲಮಡಿ ರಸ್ತೆಯಲ್ಲಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಸುಮಾರು ಒಂದೂವರೆರಿಂದ ಎರಡು ವರ್ಷ ಪ್ರಾಯದ ಚಿರತೆಯೊಂದು ಮೃತಪಟ್ಟಿದೆ. ಮಂಗಳವಾರ ನಸುಕಿನ ಜಾವ ಈ ಘಟನೆ ನಡೆದಿದ್ದು, ರಸ್ತೆ ದಾಟುವ ಸಂದರ್ಭದಲ್ಲಿ ವಾಹನ ಡಿಕ್ಕಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಕೆಎಸ್‌ಇಟಿ ಪರೀಕ್ಷೆಯಲ್ಲಿ ರೂಪಾ ಗೌಡ ಸಾಧನೆ: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್‌ಇಟಿ)–೨೦೨೬ರಲ್ಲಿ ಉತ್ತೀರ್ಣರಾಗುವ ಮೂಲಕ ಭಟ್ಕಳದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಕುಮಾರಿ ರೂಪಾ ಗೌಡ ಶೈಕ್ಷಣಿಕ ಸಾಧನೆ ಮೆರೆದಿದ್ದಾರೆ.

ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ರಾಹುಲ್ ಆಯ್ಕೆ: ಭಟ್ಕಳದ ಯುವ ಕರಾಟೆ ಪಟು ಬಿ.ವಿ. ರಾಹುಲ್ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಸಾಧನೆಯೊಂದಿಗೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಅವರು ಭಟ್ಕಳ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕ್ರೀಡಾ ವಲಯದಲ್ಲಿ ಸಂತಸ ಮೂಡಿಸಿದ್ದಾರೆ.

ಮಕ್ಕಳ ರೋಟಾ ವೈರಸ್ ಲಸಿಕೆ ಪೂರೈಕೆ ಪುನರಾರಂಭ: ಕಳೆದ ಒಂದು ತಿಂಗಳಿಂದ ಮಕ್ಕಳ ರೋಟಾ ವೈರಸ್ ಲಸಿಕೆ ಲಭ್ಯವಿಲ್ಲದೆ ಪೋಷಕರು ಎದುರಿಸುತ್ತಿದ್ದ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಇದೀಗ ಲಸಿಕೆ ಪೂರೈಕೆಯಾಗಿದ್ದು, ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆ ಪುನರಾರಂಭಗೊಂಡಿದೆ. ಲಸಿಕೆ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದ ಪೋಷಕರಿಗೆ ಇದು ಸಮಾಧಾನ ತಂದಿದೆ.

ಓಸಿ ಮಟ್ಕಾ ಜೂಜಾಟ: ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಭಟ್ಕಳ ತಾಲೂಕಿನ ೩೮ ವರ್ಷದ ವ್ಯಕ್ತಿಯೊಬ್ಬರನ್ನು ಮುರ್ಡೇಶ್ವರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಭಟ್ಕಳದಲ್ಲೇ ಪ್ರೊ ಕಬಡ್ಡಿ ಆಯೋಜಿಸುವ ಕನಸು: ಕ್ರೀಡಾಂಗಣ ನಿರ್ಮಾಣಕ್ಕೂ ಮಂಕಾಳ ವೈದ್ಯ ಭರವಸೆ

ಭಟ್ಕಳದಲ್ಲಿ ಆಹಾರ ಸುರಕ್ಷತಾ ಅಧಿಕಾರಿಯೇ ಇಲ್ಲ! ಸಾರ್ವಜನಿಕರ ಆರೋಗ್ಯದ ಬಗ್ಗೆ ಕಳವಳ

ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀನಿನ ಕೊಳಚೆ ನೀರು ಚೆಲ್ಲಾಟ: ಪ್ರಶ್ನಿಸಿದ ಮಾಜಿ ಸೈನಿಕನಿಗೆ ಬೆದರಿಕೆ ಆರೋಪ