ಭಟ್ಕಳ ಡೈರಿ ವರದಿ
ಭಟ್ಕಳ: ನೂರಾರು ಹೋಟೆಲ್ಗಳು, ಬೇಕರಿಗಳು, ಮೀನು-ಮಾಂಸ ಮಾರಾಟ ಮಳಿಗೆಗಳು ಹಾಗೂ ಬೀದಿಬದಿ ಆಹಾರ ಕೇಂದ್ರಗಳನ್ನು ಹೊಂದಿರುವ ಭಟ್ಕಳ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಆಹಾರ ಸುರಕ್ಷತಾ ಅಧಿಕಾರಿ ಹುದ್ದೆ ಖಾಲಿ ಉಳಿದಿದೆ. ಆಹಾರದ ಗುಣಮಟ್ಟದ ಮೇಲೆ ನಿಗಾ ವಹಿಸಬೇಕಾದ ಅಧಿಕಾರಿಯೇ ಇಲ್ಲದಿರುವುದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿದೆ.
ತಕ್ಷಣವೇ ಆಹಾರ ಸುರಕ್ಷತಾ ಅಧಿಕಾರಿಯನ್ನು ನೇಮಕ ಮಾಡುವಂತೆ ಆಗ್ರಹಿಸಿ, ಭಟ್ಕಳ ತಾಲೂಕು ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಅಧ್ಯಕ್ಷ ನಾಗೇಂದ್ರ ಶಂಕರ ನಾಯ್ಕ ಜಿಲ್ಲಾಧಿಕಾರಿ ಭೋಯರ್ ಹರ್ಷಲ್ ನಾರಾಯಣರಾವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಭಟ್ಕಳ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿದ್ದು, ಇಲ್ಲಿ ನೂರಾರು ಹೋಟೆಲ್ಗಳು, ರೆಸ್ಟೋರೆಂಟ್ಗಳು, ಬೇಕರಿಗಳು, ಮೀನು ಮತ್ತು ಮಾಂಸ ಮಾರಾಟ ಮಳಿಗೆಗಳು, ಹಣ್ಣು-ತರಕಾರಿ ಅಂಗಡಿಗಳು ಹಾಗೂ ಬೀದಿಬದಿ ಆಹಾರ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ಸಾವಿರಾರು ಜನರು ಈ ಆಹಾರ ಕೇಂದ್ರಗಳನ್ನು ಅವಲಂಬಿಸಿದ್ದಾರೆ.
ಆದರೆ, ಆಹಾರ ಸುರಕ್ಷತಾ ಅಧಿಕಾರಿ ಇಲ್ಲದ ಕಾರಣ ಆಹಾರ ಮಾರಾಟ ಮಳಿಗೆಗಳಲ್ಲಿ ನಿಯಮಿತ ತಪಾಸಣೆ ನಡೆಯುತ್ತಿಲ್ಲ. ಆಹಾರ ಕಲಬೆರಕೆ, ಕಳಪೆ ಗುಣಮಟ್ಟದ ಆಹಾರ ಮಾರಾಟ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕುವ ವ್ಯವಸ್ಥೆ ದುರ್ಬಲವಾಗಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಅಗತ್ಯ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುವ ಹೋಟೆಲ್ಗಳು ಮತ್ತು ಆಹಾರ ಮಾರಾಟ ಕೇಂದ್ರಗಳ ವಿರುದ್ಧ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಇದರಿಂದ ಗ್ರಾಹಕರಿಗೆ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಆತಂಕ ಎದುರಾಗಿದೆ ಎಂದು ನಾಗೇಂದ್ರ ನಾಯ್ಕ ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಹಾಲಿ ವಿಧಾನಸಭಾ ಉಪಸಭಾಪತಿಗಳ ಗಮನಕ್ಕೂ ತರಲಾಗಿದ್ದರೂ, ಈವರೆಗೆ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾತ್ಕಾಲಿಕವಾಗಿಯಾದರೂ ಅಧಿಕಾರಿ ನಿಯೋಜನೆಗೆ ಆಗ್ರಹ:ಭಟ್ಕಳ ತಾಲೂಕಿಗೆ ಪೂರ್ಣಾವಧಿ ಆಹಾರ ಸುರಕ್ಷತಾ ಅಧಿಕಾರಿಯನ್ನು ತಕ್ಷಣ ನೇಮಕ ಮಾಡಬೇಕು. ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬೇರೆ ತಾಲೂಕಿನ ಅಧಿಕಾರಿಯೊಬ್ಬರನ್ನು ತಾತ್ಕಾಲಿಕವಾಗಿ ನಿಯೋಜಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹೋಟೆಲ್ಗಳು, ಬೇಕರಿಗಳು, ಮೀನು ಮತ್ತು ಮಾಂಸ ಮಾರಾಟ ಮಳಿಗೆಗಳು ಸೇರಿದಂತೆ ಎಲ್ಲ ಆಹಾರ ಮಾರಾಟ ಕೇಂದ್ರಗಳ ನಿಯಮಿತ ತಪಾಸಣೆ ನಡೆಸಬೇಕು. ಆಹಾರದ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಅಲ್ಲದೆ, ಈ ವಿಚಾರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಗಮನಕ್ಕೂ ತಂದು, ಸಂಬಂಧಪಟ್ಟ ಇಲಾಖೆಯ ಮೂಲಕ ಶೀಘ್ರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಬೇಕು ಎಂದು ನಾಗೇಂದ್ರ ಶಂಕರ ನಾಯ್ಕ ಮನವಿ ಮಾಡಿದ್ದಾರೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀನಿನ ಕೊಳಚೆ ನೀರು ಚೆಲ್ಲಾಟ: ಪ್ರಶ್ನಿಸಿದ ಮಾಜಿ ಸೈನಿಕನಿಗೆ ಬೆದರಿಕೆ ಆರೋಪ
ಮಂಕಿ ಬಳಿ ಸ್ಕೂಟಿಗೆ ಡಿಕ್ಕಿ: ಮುರುಡೇಶ್ವರದ ಬೈಕ್ ಸವಾರನ ವಿರುದ್ಧ ದೂರು




Trackbacks/Pingbacks