ಭಟ್ಕಳ ಡೈರಿ ವರದಿ
ಭಟ್ಕಳ: ವಧೆ ಮಾಡುವ ಉದ್ದೇಶದಿಂದ ಯಾವುದೇ ಪರವಾನಗಿ ಇಲ್ಲದೆ ೧೩ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ಅ.೬ರಂದು ಮುಂಜಾನೆ ಸುಮಾರು ೨.೫೦ರ ವೇಳೆಗೆ ಶಿರಾಲಿ ಚೆಕ್‌ಪೋಸ್ಟ್ ಬಳಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಜಾನುವಾರು ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ.
ಹೊನ್ನಾವರ ಕಡೆಯಿಂದ ಭಟ್ಕಳದತ್ತ ಬರುತ್ತಿದ್ದ ಕೆಎ-೩೭/೯೫೫೫ ನೋಂದಣಿ ಸಂಖ್ಯೆಯ ಟಾಟಾ ೯೦೯ ಲಾರಿಯನ್ನು ಪರಿಶೀಲಿಸಿದಾಗ, ಯಾವುದೇ ಸಾಗಾಟ ಪರವಾನಗಿ ಇಲ್ಲದೆ ೧೩ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ತುಂಬಿಸಿರುವುದು ಪತ್ತೆಯಾಗಿದೆ.
ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಮತ್ತು ಮೇವು ನೀಡದೆ ಸಾಗಿಸಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಧೆ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರನ್ನು ಕಂಡ ಲಾರಿ ಚಾಲಕ ಹಾಗೂ ಕ್ಲೀನರ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಜಾನುವಾರುಗಳನ್ನು ರಕ್ಷಿಸಿ, ಸುಮಾರು ₹೧೩ ಲಕ್ಷ ಮೌಲ್ಯದ ಜಾನುವಾರುಗಳು ಹಾಗೂ ಸಾಗಾಟಕ್ಕೆ ಬಳಸಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಚಾಲಕ–ಕ್ಲೀನರ್‌ಗಾಗಿ ಶೋಧ: ಪರಾರಿಯಾಗಿರುವ ಲಾರಿ ಚಾಲಕ ಹಾಗೂ ಕ್ಲೀನರ್‌ರನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯ ಪಿಎಸ್ಐ ಭರಮಪ್ಪ ಬೆಳಗಲಿ ಅವರು ಸರ್ಕಾರದ ಪರವಾಗಿ ದೂರು ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮಂಜುನಾಥ ಖಾರ್ವಿ, ನಾಗರಾಜ ಹೋತನಳ್ಳಿ, ಅಂಬರೀಷ್ ಕುಂಬಾರಿ, ಮೋಹನ ಕಬ್ಬೇರ, ಸಂತೋಷ ಹಡಪದ ಹಾಗೂ ಹೋಮಗಾರ್ಡ್ ವೆಂಕಟ್ರಮಣ ಗೊಂಡ ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಪ್ರಕರಣದ ತನಿಖೆಯನ್ನು ಮಲ್ಲಿಕಾರ್ಜುನಯ್ಯ ಕೊರಾಣಿ ಅವರು ಕೈಗೊಂಡಿದ್ದಾರೆ.
ಇದನ್ನೂ ಓದಿ :
ಭಟ್ಕಳದಲ್ಲಿ ಗಾಂಜಾ ಸೇವನೆ ಆರೋಪ: ೧೯ ವರ್ಷದ ಯುವಕನ ವಿರುದ್ಧ ಪ್ರಕರಣ
ಕಾರವಾರ–ಇಳಕಲ್ ರಸ್ತೆಯಲ್ಲಿ ಅಪಾಯದ ಸಂಚಾರ: ಶೀಘ್ರ ದುರಸ್ತಿಗೆ ಮನವಿ
ಭಟ್ಕಳಕ್ಕೆ ಉಪ ಬಂಧಿಖಾನೆ ಯಾವಾಗ? ಪೊಲೀಸ್ ವ್ಯವಸ್ಥೆ, ಬಂಧಿತರ ಕುಟುಂಬಗಳ ಸಂಕಷ್ಟಕ್ಕೆ ಪರಿಹಾರ ಬೇಕು




