ಭಟ್ಕಳ ಡೈರಿ ವರದಿ
ಕಾರವಾರ: ಕಾರವಾರ–ಇಳಕಲ್–ಕೈಗಾ ರಾಜ್ಯ ರಸ್ತೆಯ ಹಳೆಕೋಟದಿಂದ ಕಡವಾಡ ಕ್ರಾಸ್‌ವರೆಗೆ ರಸ್ತೆಯ ಒಂದು ಬದಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರವಾರ ನಗರ ಘಟಕ ಆಗ್ರಹಿಸಿದೆ. ಈ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಕರವೇ ಕಾರವಾರ ನಗರ ಘಟಕದ ಅಧ್ಯಕ್ಷ ರಾಜಾ ನಾಯ್ಕ, ಹಲವು ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಸ್ತೆ ಇದೀಗ ಹದಗೆಟ್ಟಿರುವುದಾಗಿ ತಿಳಿಸಿದ್ದಾರೆ.
ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಮುಖ್ಯ ರಸ್ತೆಯ ಒಂದು ಬದಿಗೆ ಮಾತ್ರ ಡಾಂಬರೀಕರಣ ಕಾಮಗಾರಿ ನಡೆಸಲಾಗಿತ್ತು. ಮತ್ತೊಂದು ಭಾಗದ ಕಾಮಗಾರಿ ಪೂರ್ಣಗೊಳಿಸದಿರುವುದು ಹಾಗೂ ಗುಣಮಟ್ಟದ ಕಾಮಗಾರಿ ಕೈಗೊಳ್ಳದಿರುವುದೇ ಪ್ರಸ್ತುತ ಸಮಸ್ಯೆಗೆ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ರಸ್ತೆಯ ಒಂದು ಭಾಗದಲ್ಲಿ ದೊಡ್ಡ ಪ್ರಮಾಣದ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹದಗೆಟ್ಟ ಭಾಗವನ್ನು ತಪ್ಪಿಸಲು ವಾಹನಗಳು ಎದುರಿನ ಪಥಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿಶೇಷವಾಗಿ ರಾತ್ರಿ ವೇಳೆಯಲ್ಲಿ ವಾಹನ ಸವಾರರು ಹೊಂಡಗಳನ್ನು ಗಮನಿಸದೆ ಬಿದ್ದು ಅಪಘಾತಕ್ಕೀಡಾಗುವ ಸಾಧ್ಯತೆ ಇದೆ. ಹಗಲಿನಲ್ಲಿಯೂ ಹೊಂಡಗಳನ್ನು ತಪ್ಪಿಸಲು ಹೋಗುವಾಗ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿಯಾಗುವ ಅಥವಾ ವಾಹನಗಳು ಸ್ಕಿಡ್ ಆಗುವ ಘಟನೆಗಳು ಸಂಭವಿಸುತ್ತಿವೆ ಎಂದು ರಾಜಾ ನಾಯ್ಕ ತಿಳಿಸಿದ್ದಾರೆ.
ಈ ಮಾರ್ಗದಲ್ಲಿ ಬಸ್, ಬೈಕ್, ಆಟೊರಿಕ್ಷಾ ಸೇರಿದಂತೆ ವಿವಿಧ ವಾಹನಗಳ ಸಂಚಾರವಿದ್ದು, ಶಾಲಾ ವಿದ್ಯಾರ್ಥಿಗಳೂ ಇದೇ ರಸ್ತೆಯನ್ನು ಬಳಸುತ್ತಿದ್ದಾರೆ. ಹೀಗಾಗಿ ರಸ್ತೆ ಹದಗೆಟ್ಟಿರುವುದು ಸಾರ್ವಜನಿಕರ ಸುರಕ್ಷತೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಕಾರವಾರ–ಇಳಕಲ್ ಸಂಪರ್ಕಿಸುವ ಪ್ರಮುಖ ರಾಜ್ಯ ರಸ್ತೆಯ ಈ ಭಾಗದ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಶೀಘ್ರವಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ರಾಜಾ ನಾಯ್ಕ ಒತ್ತಾಯಿಸಿದ್ದಾರೆ.
ಇದನ್ನೂ ಓದಿ :
ಭಟ್ಕಳಕ್ಕೆ ಉಪ ಬಂಧಿಖಾನೆ ಯಾವಾಗ? ಪೊಲೀಸ್ ವ್ಯವಸ್ಥೆ, ಬಂಧಿತರ ಕುಟುಂಬಗಳ ಸಂಕಷ್ಟಕ್ಕೆ ಪರಿಹಾರ ಬೇಕು
ಬೈಲೂರು ಬಳಿ ಮೀನುಗಾರಿಕೆಗೆ ತೆರಳಿದ್ದ ವಿದ್ಯಾರ್ಥಿ ಸಮುದ್ರ ಪಾಲು




