ಭಟ್ಕಳ ಡೈರಿ ವರದಿ
ಭಟ್ಕಳ: ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ್ದ ಒಟ್ಟು ಆರು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ಟೋಬರ್ ೫ರಂದು ರಾತ್ರಿ ಭಟ್ಕಳ ಶಹರದ ಸಂತೆ ಮಾರ್ಕೆಟ್ ಹಾಗೂ ನೀರಿನ ಟ್ಯಾಂಕ್ ಬಳಿ ಮಾದಕ ವಸ್ತುವಿನ ಅಮಲಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಮೊದಲ ಪ್ರಕರಣದಲ್ಲಿ ದಾವಣಗೆರೆಯ ಶಫಿವುಲ್ಲಾ, ಭಟ್ಕಳ ಗುಳ್ಮಿಯ ಮಹ್ಮದ್ ಗೌಸ್ ಖಾನ್ ಹಾಗೂ ಮಗ್ದುಂ ಕಾಲೋನಿಯ ಸೈಯ್ಯದ್ ಅಬ್ದುಲ್ ಮಜೀದ್ ಎಂಬುವವರನ್ನು ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಪೊಲೀಸ್ ಉಪ ನಿರೀಕ್ಷಕ ನವೀನ್ ನಾಯ್ಕ ನಡೆಸುತ್ತಿದ್ದಾರೆ.
ಎರಡನೇ ಪ್ರಕರಣದಲ್ಲಿ ಭಟ್ಕಳ ಬಿಳಾಲಖಂಡ ಮೂಲದ ಹಣ್ಣಿನ ವ್ಯಾಪಾರಿಗಳಾದ ಮೊಹಮ್ಮದ್ ಮಕ್ಬುಲ್ ಗಂಗಾವಳಿ, ಮೊಹಮ್ಮದ್ ಇಸ್ಮಾಯಿಲ್ ಹಾಗೂ ನವೀದ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ತನಿಖಾ ವಿಭಾಗದ ಪೊಲೀಸ್ ಉಪ ನಿರೀಕ್ಷಕ ತಿಮ್ಮಪ್ಪ ಎಸ್ ವಹಿಸಿಕೊಂಡಿದ್ದಾರೆ.
ವಶಕ್ಕೆ ಪಡೆದ ಆರೋಪಿಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈದ್ಯಾಧಿಕಾರಿಗಳು ನೀಡಿರುವ ಪರೀಕ್ಷಾ ವರದಿಯಲ್ಲಿ ಆರೋಪಿಗಳು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ವೈದ್ಯಕೀಯ ವರದಿ ಆಧಾರದ ಮೇಲೆ ಸರ್ಕಾರದ ಪರವಾಗಿ ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಇದನ್ನೂ ಓದಿ:
ಶಿರಾಲಿಯಲ್ಲಿ ಬಾವಿಗೆ ಹಾರಿ ವೃದ್ಧ ಆತ್ಮಹತ್ಯೆ
ಭಟ್ಕಳದಲ್ಲಿ ಮಳೆಯ ಸಾಧ್ಯತೆ ಮುಂದುವರಿಕೆ; ಅ.೧೦ರವರೆಗೆ ಕರಾವಳಿಯಲ್ಲಿ ಮಳೆ-ಗುಡುಗು ಮುನ್ಸೂಚನೆ




