ಭಟ್ಕಳ ಡೈರಿ ವರದಿ
ಮುರ್ಡೇಶ್ವರ: ಅರಬ್ಬಿ ಸಮುದ್ರದಲ್ಲಿ ಸುಮಾರು ೬–೭ ದಿನಗಳ ಹಿಂದೆ ಮೃತಪಟ್ಟಿರಬಹುದಾದ ಅಪರಿಚಿತ ವ್ಯಕ್ತಿಯ ಶವ ಅ. ೭ರಂದು ಪತ್ತೆಯಾಗಿದೆ. ಕರಾವಳಿ ಕಾವಲು ಪೊಲೀಸ್ ಠಾಣೆಯ ಭಟ್ಕಳ ಘಟಕದ ಪಿಎಸ್ಐ ವೀಣಾ ಚಿತ್ರಾಪುರ ನೀಡಿದ ದೂರಿನ ಆಧಾರದ ಮೇಲೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾಗರ ಕವಚ ಬಂದೋಬಸ್ತ್ ಕರ್ತವ್ಯದ ಹಿನ್ನೆಲೆಯಲ್ಲಿ ಪಿಎಸ್ಐ ವೀಣಾ ಚಿತ್ರಾಪುರ ಅವರು ಸಿಬ್ಬಂದಿಯೊಂದಿಗೆ ಅ. ೭ರಂದು ಬೆಳಿಗ್ಗೆ ೬ ಗಂಟೆಯಿಂದ ಅರಬ್ಬಿ ಸಮುದ್ರದಲ್ಲಿ ಬೋಟ್ ಮೂಲಕ ಗಸ್ತು ಕರ್ತವ್ಯದಲ್ಲಿದ್ದರು. ಈ ವೇಳೆ ಬೆಳಿಗ್ಗೆ ಸುಮಾರು ೮.೩೦ರ ಹೊತ್ತಿಗೆ ಸಮುದ್ರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ಈಜಲು ಅಥವಾ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ದೂರಿನಲ್ಲಿ ಶಂಕಿಸಲಾಗಿದೆ.
ಮೃತ ವ್ಯಕ್ತಿಗೆ ಸುಮಾರು ೪೦ರಿಂದ ೫೦ ವರ್ಷ ವಯಸ್ಸಾಗಿರಬಹುದು. ಸುಮಾರು ೫ ಅಡಿ ೮ ಇಂಚು ಎತ್ತರ ಹಾಗೂ ಬಿಳಿ ಮೈಬಣ್ಣ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನು ಕಂದು ಬಣ್ಣದ ನಿಕ್ಕರ್ ಧರಿಸಿದ್ದನು. ಬಲ ಕೈಯಲ್ಲಿ ಕಡಗ ಹಾಗೂ ಕೆಂಪು ಬಣ್ಣದ ದಾರ ಕಟ್ಟಿಕೊಂಡಿದ್ದನು.
ಶವದ ಮುಖದ ಭಾಗವನ್ನು ಜಲಚರ ಪ್ರಾಣಿಗಳು ಕಚ್ಚಿ ತಿಂದಿರುವುದರಿಂದ ಮುಖದ ಕೆಲವು ಭಾಗಗಳಲ್ಲಿ ಒಳಗಿನ ಎಲುಬುಗಳು ಕಾಣಿಸುತ್ತಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಪರಿಚಿತ ವ್ಯಕ್ತಿಯ ಸಾವಿಗೆ ನಿಖರ ಕಾರಣವೇನು ಹಾಗೂ ಆತ ಯಾರು ಎಂಬುದನ್ನು ತನಿಖೆ ಮೂಲಕ ಪತ್ತೆಹಚ್ಚಬೇಕಿದೆ. ಈ ಕುರಿತು ಮುರ್ಡೇಶ್ವರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ :




