ಭಟ್ಕಳ ಡೈರಿ ವರದಿ
ಭಟ್ಕಳ: ವಿಜಯದಶಮಿಯ ಶುಭದಿನವಾದ ಅಕ್ಟೋಬರ್ ೨೦ರಂದು ಕುಂದಾಪುರ ತಾಲೂಕಿನ ಪ್ರಸಿದ್ಧ ಶಕ್ತಿ ಕ್ಷೇತ್ರ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಭಕ್ತಿಗೀತೆಗಳ ಸುಮಧುರ ಗಾಯನ ಭಕ್ತರನ್ನು ಆಕರ್ಷಿಸಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರ ಸಾರಥ್ಯದ ನಿನಾದ ಕಲ್ಚರಲ್ ಅಕಾಡೆಮಿ ವತಿಯಿಂದ ಶರನ್ನವರಾತ್ರಿ ಉತ್ಸವದ ಅಂಗವಾಗಿ ಭಕ್ತಿಗಾನಾಮೃತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಜೆ ೬ರಿಂದ ರಾತ್ರಿ ೮ರವರೆಗೆ ನಡೆದ ಕಾರ್ಯಕ್ರಮದಲ್ಲಿ ವಿವಿಧ ಭಕ್ತಿಗೀತೆಗಳು ದೇವಿಯ ಸನ್ನಿಧಿಯಲ್ಲಿ ಮೊಳಗಿದವು. ಸುಮಧುರ ಗಾಯನದ ಮೂಲಕ ದೇವಸ್ಥಾನದ ಆವರಣದಲ್ಲಿ ಭಕ್ತಿಭಾವ ಹಾಗೂ ಆಧ್ಯಾತ್ಮಿಕ ವಾತಾವರಣ ಮೂಡಿತು. ಕಾರ್ಯಕ್ರಮದಲ್ಲಿ ಉಮೇಶ ಮುಂಡಳ್ಳಿ ಅವರೊಂದಿಗೆ ಭಟ್ಕಳದ ಗಾಯಕ ಗೋಪಾಲ ನಾಯ್ಕ, ನಿನಾದ ಉಮೇಶ ಹಾಗೂ ಉತ್ಥಾನ ಉಮೇಶ ಗಾಯನ ಪ್ರಸ್ತುತಪಡಿಸಿದರು. ಉಡುಪಿ ಜಿಲ್ಲೆಯ ಹಿರಿಯ ಕಲಾವಿದ ಉಮೇಶ ಮೇಸ್ತ ಅವರು ಹಾರ್ಮೋನಿಯಂ ವಾದನದೊಂದಿಗೆ ಗಾಯನಕ್ಕೂ ಸಹಕರಿಸಿದರು. ಶ್ಯಾಮ್ ಮೇಸ್ತ ಅವರು ರಿದಂ ಪ್ಯಾಡ್ನಲ್ಲಿ ಸಾಥ್ ನೀಡಿದರು.
ಕಲಾವಿದರು ವಿವಿಧ ಭಕ್ತಿಗೀತೆಗಳ ಮೂಲಕ ದೇವಿಯ ಮಹಿಮೆಯನ್ನು ಸಂಗೀತದ ರೂಪದಲ್ಲಿ ಅರ್ಪಿಸಿದರು. ಗಾಯನಕ್ಕೆ ನೆರೆದಿದ್ದ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು. ಕಾರ್ಯಕ್ರಮದ ಸಮಾರೋಪದಲ್ಲಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪಕ ರಾಜಶೇಖರ್ ಹೆಗಡೆ ಅವರು ಗಾಯಕ ಉಮೇಶ ಮುಂಡಳ್ಳಿ ಅವರನ್ನು ಸ್ಮರಣಿಕೆ ನೀಡಿ ಗೌರವಿಸಿದರು.
ಇದನ್ನೂ ಓದಿ :
೧೦ ಲಕ್ಷ ಗಿಡ ಬೆಳೆಸಿದ ಭಟ್ಕಳದ ಈ ವ್ಯಕ್ತಿಯ ಮುಂದಿನ ಗುರಿ ಏನು ಗೊತ್ತಾ? ಒಂದು ಕೋಟಿ!
ಭಟ್ಕಳ: ಯಕ್ಷ ಚೌಡೇಶ್ವರಿ ದೇವಸ್ಥಾನದಲ್ಲಿ ನಿನಾದ ಭಾವಗಾನ




