ಭಟ್ಕಳ ಡೈರಿ ವರದಿ

ಭಟ್ಕಳ: ಗಿಡ ನೆಡುವುದು ಸುಲಭ… ಆದರೆ ನೆಟ್ಟ ಗಿಡವನ್ನು ವರ್ಷಗಟ್ಟಲೆ ಕಾಳಜಿಯಿಂದ ಬೆಳೆಸುವುದು ಅಷ್ಟು ಸುಲಭವಲ್ಲ. ಕಟಗೇರಿಯ ಪಾಂಡುರಂಗ ನಾಯ್ಕ ಮಾತ್ರ ಕಳೆದ ಸುಮಾರು ೨೫ ವರ್ಷಗಳಿಂದ ಇದೇ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ. ಇದೀಗ ೧೦ ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿರುವ ಅವರು, ಒಂದು ಕೋಟಿ ಗಿಡಗಳ ಹೊಸ ಸಂಕಲ್ಪದೊಂದಿಗೆ ಹಸಿರು ಪಯಣಕ್ಕೆ ಮುಂದಾಗಿದ್ದಾರೆ.

ಬೆಳಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟಗೇರಿ ನಿವಾಸಿ ಪಾಂಡುರಂಗ ನಾಯ್ಕ ಅವರ ಪರಿಸರ ಸೇವೆ ಕೇವಲ ವೃಕ್ಷಾರೋಪಣೆಗೆ ಸೀಮಿತವಾಗಿಲ್ಲ. ನೆಟ್ಟ ಗಿಡಗಳನ್ನು ಪೋಷಿಸುವುದರ ಜತೆಗೆ ಪರಿಸರ ಸಮತೋಲನಕ್ಕೆ ನೆರವಾಗುವ ಫಲವೃಕ್ಷಗಳಿಗೂ ಅವರು ವಿಶೇಷ ಆದ್ಯತೆ ನೀಡುತ್ತಿದ್ದಾರೆ.

ನಿತ್ಯಾನಂದರ ಪ್ರೇರಣೆಯಿಂದ ಹಸಿರು ಹಾದಿ: ಸಾಮಾನ್ಯ ಕುಟುಂಬದಿಂದ ಬಂದ ಪಾಂಡುರಂಗ ನಾಯ್ಕ ಉದ್ಯೋಗದ ನಿಮಿತ್ತ ಮುಂಬೈಗೆ ತೆರಳಿದ್ದರು. ಅಲ್ಲಿ ಭಗವಾನ್ ನಿತ್ಯಾನಂದರ ಪ್ರೇರಣೆಯಿಂದ ಪರಿಸರ ಸಂರಕ್ಷಣೆಯತ್ತ ಆಸಕ್ತಿ ಬೆಳೆಸಿಕೊಂಡರು. ಆ ಬಳಿಕ ಸುಮಾರು ಎರಡೂವರೆ ದಶಕಗಳಿಂದ ವೃಕ್ಷಾರೋಪಣ ಮತ್ತು ಗಿಡಗಳ ಪೋಷಣೆಯನ್ನು ತಮ್ಮ ಜೀವನದ ಪ್ರಮುಖ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಭಗವಾನ್ ನಿತ್ಯಾನಂದ ಶಕ್ತಿಪಾತ ಯೋಗ ಟ್ರಸ್ಟ್ (ರಿ.) ಸ್ಥಾಪಿಸಿ ಪರಿಸರ ಸೇವೆಯನ್ನು ಸಂಘಟಿತವಾಗಿ ಮುಂದುವರಿಸುತ್ತಿದ್ದಾರೆ.

೧೦ ಲಕ್ಷ ಗಿಡಗಳ ಬಳಿಕ ಕೋಟಿ ವೃಕ್ಷದ ಸಂಕಲ್ಪ: ಇದುವರೆಗೆ ಸುಮಾರು ೧೦ ಲಕ್ಷ ಗಿಡಗಳನ್ನು ನೆಟ್ಟು ಪೋಷಿಸಿರುವ ಪಾಂಡುರಂಗ ನಾಯ್ಕ, ತಮ್ಮ ಪರಿಸರ ಸೇವೆಗೆ ೨೫ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇದೀಗ ‘ಕೋಟಿ ವೃಕ್ಷ ಅಭಿಯಾನ’ಕ್ಕೆ ಮುಂದಾಗಿದ್ದಾರೆ. ಕನ್ಯಾಕುಮಾರಿಯಿಂದ ಅಯೋಧ್ಯೆಯವರೆಗೆ ಹಸಿರು ಪಯಣ ನಡೆಸುವ ಉದ್ದೇಶ ಹೊಂದಿರುವ ಅವರು, ಅಕ್ಟೋಬರ್ ೨೧ರಂದು ಉಡುಪಿಯ ಶ್ರೀ ನಿತ್ಯಾನಂದ ಆಶ್ರಮದಿಂದ ಅಭಿಯಾನಕ್ಕೆ ಚಾಲನೆ ನೀಡಲು ಉದ್ದೇಶಿಸಿದ್ದಾರೆ.

ಕೇವಲ ಗಿಡ ನೆಡುವುದಲ್ಲ, ಬೆಳೆಸುವ ಗುರಿ: ಕೋಟಿ ಗಿಡಗಳನ್ನು ನೆಟ್ಟು ಫೋಟೋ ತೆಗೆಸಿಕೊಳ್ಳುವುದಷ್ಟೇ ಅಭಿಯಾನದ ಉದ್ದೇಶವಲ್ಲ. ನೆಟ್ಟ ಗಿಡಗಳು ಒಂದು ಹಂತಕ್ಕೆ ಬೆಳೆಯುವವರೆಗೆ ಅವುಗಳ ಪೋಷಣೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ. ‘ಏಕ್ ಪೇಡ್ ಮೇರಾ ನಾಮ್ ಪೆ’, ‘ವಿಶ್ವವೇ ಒಂದು ಕುಟುಂಬ’ ಹಾಗೂ ‘ನಾನು, ನನ್ನದು, ನನ್ನಿಂದಾದದ್ದು ಶೂನ್ಯವಾಗಿರಲಿ’ ಎಂಬ ಸಂದೇಶಗಳೊಂದಿಗೆ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ.

ಪ್ರಾಣಿ-ಪಕ್ಷಿಗಳಿಗೂ ಹಸಿರು ಆಹಾರ: ಪಾಂಡುರಂಗ ನಾಯ್ಕ ಅವರ ಪರಿಸರ ಸೇವೆಯಲ್ಲಿ ಫಲವೃಕ್ಷಗಳಿಗೆ ವಿಶೇಷ ಸ್ಥಾನವಿದೆ. ಹಲಸು, ಮಾವು, ನೇರಳೆ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಸ್ವತಃ ಖರೀದಿಸಿ ನೆಟ್ಟು ಪೋಷಿಸುತ್ತಿದ್ದಾರೆ. ಇವು ಬೆಳೆದು ಫಲ ನೀಡಿದಾಗ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳಿಗೂ ಆಹಾರ ದೊರೆಯಬೇಕು ಎಂಬುದು ಅವರ ಆಶಯ. ಜತೆಗೆ ಮರಗಳು ನೆರಳು, ಹಸಿರು ಮತ್ತು ಪರಿಸರ ಸಮತೋಲನಕ್ಕೂ ನೆರವಾಗಲಿವೆ.

ಜನರ ಸಹಕಾರವೇ ಬಲ: ಕಳೆದ ೨೫ ವರ್ಷಗಳ ಪರಿಸರ ಸೇವೆಯಲ್ಲಿ ಪರಿಸರ ಪ್ರೇಮಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಪಾಂಡುರಂಗ ನಾಯ್ಕ ಅವರೊಂದಿಗೆ ಕೈಜೋಡಿಸಿದ್ದಾರೆ. ವಿವಿಧ ಇಲಾಖೆಗಳು ಮತ್ತು ಅರಣ್ಯ ಇಲಾಖೆಯಿಂದಲೂ ಸಹಕಾರ ದೊರೆತಿದೆ. ಇದೀಗ ಕೋಟಿ ವೃಕ್ಷ ಅಭಿಯಾನವನ್ನು ಜನರ ಸಹಭಾಗಿತ್ವದೊಂದಿಗೆ ಯಶಸ್ವಿಗೊಳಿಸುವ ನಿರೀಕ್ಷೆಯಲ್ಲಿದ್ದಾರೆ.

ಒಬ್ಬ ವ್ಯಕ್ತಿಯ ಸಂಕಲ್ಪ ಒಂದು ಕೋಟಿ ಮರಗಳ ಗುರಿಯಾಗುತ್ತಿದೆ. ಗಿಡ ನೆಡುವುದಕ್ಕಿಂತ ಅದನ್ನು ಬೆಳೆಸುವುದು ಮುಖ್ಯ ಎಂಬ ಸಂದೇಶವನ್ನು ತಮ್ಮ ೨೫ ವರ್ಷಗಳ ಸೇವೆಯ ಮೂಲಕ ಸಾರುತ್ತಿರುವ ಪಾಂಡುರಂಗ ನಾಯ್ಕ, ಭಟ್ಕಳದ ಹಸಿರು ಹಾದಿಯಲ್ಲೊಂದು ವಿಭಿನ್ನ ಮಾದರಿಯಾಗಿದ್ದಾರೆ.

ಇದನ್ನೂ ಓದಿ :

ಭಟ್ಕಳ: ಯಕ್ಷ ಚೌಡೇಶ್ವರಿ ದೇವಸ್ಥಾನದಲ್ಲಿ ನಿನಾದ ಭಾವಗಾನ

ಯುವಕರನ್ನು ಕ್ರೀಡೆಯತ್ತ ಸೆಳೆದ ಟೇಬಲ್ ಟೆನಿಸ್ ಪಂದ್ಯಾವಳಿ