ಭಟ್ಕಳ ಡೈರಿ ವರದಿ
ಭಟ್ಕಳ: ಶರನ್ನವರಾತ್ರಿ ಉತ್ಸವದ ಒಂಬತ್ತನೇ ದಿನವಾದ ಅಕ್ಟೋಬರ್ ೧೯ರಂದು ಭಟ್ಕಳ ತಾಲೂಕಿನ ವೆಂಕಟಾಪುರ ಬಪ್ಪುಂಡ ಶ್ರೀ ಯಕ್ಷ ಚೌಡೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ನಿನಾದ ಕಲ್ಚರಲ್ ಅಕಾಡೆಮಿ, ಭಟ್ಕಳದ ವತಿಯಿಂದ ನಿನಾದ ಭಾವಗಾನ ಕಾರ್ಯಕ್ರಮ ನಡೆಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವು ಭಕ್ತಿಭಾವ ಮತ್ತು ಸಂಗೀತದ ಸೊಬಗಿನಿಂದ ಗಮನ ಸೆಳೆಯಿತು.
ಉಮೇಶ ಮುಂಡಳ್ಳಿ ಅವರು ಭಾವಗೀತೆ, ತತ್ವಪದ ಹಾಗೂ ಭಕ್ತಿಗೀತೆ ಸೇರಿದಂತೆ ವಿವಿಧ ಪ್ರಕಾರದ ಸುಮಧುರ ಗೀತೆಗಳನ್ನು ಪ್ರಸ್ತುತಪಡಿಸಿ ಭಕ್ತರು ಹಾಗೂ ಸಂಗೀತಾಸಕ್ತರ ಮನಸೂರೆಗೊಂಡರು. ಅವರ ಗಾಯನಕ್ಕೆ ನಿನಾದ ಉಮೇಶ, ಸುದರ್ಶನ್ ಮೇಸ್ತ ಹಾಗೂ ಉತ್ಥಾನ ಉಮೇಶ ಸಹಗಾಯನದ ಮೂಲಕ ಸಾಥ್ ನೀಡಿದರು. ವಾದ್ಯಸಂಗೀತದಲ್ಲಿ ಉಡುಪಿ ಜಿಲ್ಲೆಯ ಹಿರಿಯ ಕಲಾವಿದ ಉಮೇಶ ಶಿರೂರು ಹಾರ್ಮೋನಿಯಂನಲ್ಲಿ ಹಾಗೂ ಶ್ಯಾಮ್ ಶಿರೂರು ರಿದಂ ಪ್ಯಾಡ್ನಲ್ಲಿ ಸಹಕರಿಸಿದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಕಾರ್ಯಕ್ರಮವು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಶರನ್ನವರಾತ್ರಿ ಉತ್ಸವದ ಸಂಭ್ರಮಕ್ಕೆ ಭಾವಗಾನ ಕಾರ್ಯಕ್ರಮ ವಿಶೇಷ ಮೆರುಗು ನೀಡಿತು. ಕಾರ್ಯಕ್ರಮದ ಅಂತ್ಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪರವಾಗಿ ಶ್ರೀಧರ ನಾಯ್ಕ ಅವರು ಎಲ್ಲ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.
ಇದನ್ನೂ ಓದಿ :




