ಭಟ್ಕಳ ಡೈರಿ ವರದಿ
ಭಟ್ಕಳ: ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ಭಟ್ಕಳದ ಮುಗ್ದುಂ ಕಾಲೋನಿಗೆ ತೆರಳಿದ್ದ ಪೊಲೀಸರ ಕೈಗೆ ಸಿಗದೆ ಆರೋಪಿ ಪರಾರಿಯಾದ ಘಟನೆ ನ. ೨೦ರಂದು ನಡೆದಿದೆ. ಈ ಸಂಬಂಧ ಪೊಲೀಸರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಅಡ್ಡಿಪಡಿಸಿದ ಆರೋಪದಡಿ ದೂರು ದಾಖಲಾಗಿದೆ.
ಸಿದ್ದಾಪುರ ಜೆಎಂಎಫ್ಸಿ ನ್ಯಾಯಾಲಯದ ಪ್ರಕರಣದಲ್ಲಿ ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ (NI Act) ಕಲಂ ೧೩೮ರ ಅಡಿಯಲ್ಲಿ ಆರೋಪಿ ಅಲಿ ಮುರ್ತುಜಾ ಮೆಡಿಕಲ್ ಅಬ್ದುಲ್ ಸತ್ತಾರ್ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಈ ವಾರಂಟ್ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಸುರೇಶ್ ರಾಮಪ್ಪ ಕೊರವರ ಅವರು ಪೊಲೀಸ್ ಸಿಬ್ಬಂದಿ ಸಂತೋಷ ನಾಯ್ಕ ಅವರೊಂದಿಗೆ ನ. ೨೦ರಂದು ಭಟ್ಕಳದ ಮುಗ್ದುಂ ಕಾಲೋನಿಯಲ್ಲಿರುವ ವಾರಂಟ್ನ ವಿಳಾಸಕ್ಕೆ ತೆರಳಿದ್ದರು.
ಈ ವೇಳೆ ಆರೋಪಿ ಮನೆಯ ಸಮೀಪ ಪತ್ತೆಯಾಗಿದ್ದು, ಪೊಲೀಸರು ನ್ಯಾಯಾಲಯ ಹೊರಡಿಸಿದ್ದ ವಾರಂಟ್ ಪ್ರತಿಯನ್ನು ತೋರಿಸಿ ಆತನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಆದರೆ, ಬಂಧನದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಆರೋಪಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಸ್ಥಳದಿಂದ ಓಡಿಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಘಟನೆಯ ಕುರಿತು ನ. ೨೦ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಅಡ್ಡಿಪಡಿಸಿ ಪರಾರಿಯಾದ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಭಟ್ಕಳದಲ್ಲಿ ೩೦–೪೦ ಅಡಿ ಗುಡ್ಡ ಅಗೆತ ಆರೋಪ; ಗೊಂಡರಕೇರಿಯಲ್ಲಿ ೨೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಭೂಕುಸಿತದ ಆತಂಕ
ಭಟ್ಕಳದಲ್ಲಿ ಚಿರತೆ ದಾಳಿ ಆತಂಕದ ನಡುವೆಯೇ ಖಾಲಿ ಬೋನು! ಅರಣ್ಯ ಇಲಾಖೆಯ ಕ್ರಮಕ್ಕೆ ಕಂಡೆಕೋಡ್ಲು ಗ್ರಾಮಸ್ಥರ ಆಕ್ರೋಶ



