ಭಟ್ಕಳ ಡೈರಿ ವರದಿ
ಭಟ್ಕಳ: ಇಲ್ಲಿನ ಯುವ ಕರಾಟೆ ಪಟು ಬಿ.ವಿ. ರಾಹುಲ್ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಭಟ್ಕಳ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಸಾಧನೆಯೊಂದಿಗೆ ಅವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಭಟ್ಕಳದ ಕ್ರೀಡಾ ವಲಯದಲ್ಲಿ ಸಂತಸ ಮೂಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಜೂನಿಯರ್ ಕಾಲೇಜು ಮುಂಭಾಗದಲ್ಲಿ ನವೆಂಬರ್ ೨೧ ಮತ್ತು ೨೨ರಂದು ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ೧೪ ಮತ್ತು ೧೭ ವರ್ಷ ವಯೋಮಿತಿಯೊಳಗಿನ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ಕರಾಟೆ ಸ್ಪರ್ಧೆ-೨೦೨೬ ಆಯೋಜಿಸಲಾಗಿತ್ತು. ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ೧೭ ವರ್ಷ ವಯೋಮಿತಿಯೊಳಗಿನ -೬೬ ಕೆಜಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಿ.ವಿ. ರಾಹುಲ್ ಪ್ರಥಮ ಸ್ಥಾನ ಪಡೆದು ಸ್ವರ್ಣ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಭಟ್ಕಳದ ಆನಂದ ಆಶ್ರಮ ಶಾಲೆಯಲ್ಲಿ ೧೦ನೇ ತರಗತಿಯಲ್ಲಿ ಓದುತ್ತಿರುವ ರಾಹುಲ್, ಭಟ್ಕಳದ ಉದ್ಯಮಿ ಹಾಗೂ ನಾಮಧಾರಿ ಸಮಾಜದ ಉಪಾಧ್ಯಕ್ಷ ವಿನಾಯಕ ನಾಯ್ಕ ಮತ್ತು ಕಮಲಾ ನಾಯ್ಕ ದಂಪತಿಯ ಪುತ್ರ. ರಾಹುಲ್ಗೆ ಆನಂದ್ ಆಶ್ರಮ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ. ಭಟ್ಕಳದ ಪ್ರತಿಭೆ ರಾಜ್ಯ ಮಟ್ಟದಲ್ಲಿ ಮಿಂಚಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಹೆಜ್ಜೆ ಇಟ್ಟಿರುವುದು ಸ್ಥಳೀಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಭಟ್ಕಳದ ಅಳಿಯ, ಸಾಗರದ ಐಎಫ್ಎಸ್ ಅಧಿಕಾರಿಯ ಸಾಧನೆಗೆ ರಾಷ್ಟ್ರಮಟ್ಟದ ಮನ್ನಣೆ
ಭಟ್ಕಳದ ಶ್ರೀಗುರು ಸುಧೀಂದ್ರ ಕಾಲೇಜಿಗೆ ಸಿಎ ಪರೀಕ್ಷೆಯಲ್ಲಿ ಹೆಮ್ಮೆ ತಂದ ವಿದ್ಯಾರ್ಥಿಗಳು



