ಭಟ್ಕಳ ಡೈರಿ ವರದಿ

ಭಟ್ಕಳ: ಒಂದೆಡೆ ಮಳೆ ಕೊರತೆಯಿಂದ ಮುಂದಿನ ದಿನಗಳಲ್ಲಿ ನೀರಿನ ಅಭಾವ ಎದುರಾಗುವ ಆತಂಕ, ಮತ್ತೊಂದೆಡೆ ಸಾರ್ವಜನಿಕರ ಕಣ್ಣೆದುರೇ ಅಮೂಲ್ಯ ಕುಡಿಯುವ ನೀರು ರಸ್ತೆಯಲ್ಲಿ ಹರಿದು ಪೋಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳ ಗಮನವೇ ಇಲ್ಲದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಭಟ್ಕಳ ನಗರಸಭೆ ವ್ಯಾಪ್ತಿಯ ಹಳೆಯ ತಹಶೀಲ್ದಾರ್ ಕಚೇರಿ ಸಮೀಪದಿಂದ ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಅಪಾರ ಪ್ರಮಾಣದ ನೀರು ಅನವಶ್ಯಕವಾಗಿ ಹರಿದು ಪೋಲಾಗುತ್ತಿದೆ. ಗುರುವಾರ ಬೆಳಗ್ಗಿನಿಂದಲೇ ನಿರಂತರವಾಗಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದರೂ, ಅದನ್ನು ತಡೆಯಲು ತಕ್ಷಣದ ಕ್ರಮ ಕೈಗೊಂಡಿಲ್ಲ ಎಂಬ ಸಾರ್ವಜನಿಕರ ದೂರಿದೆ.

ಮುಂದಿನ ದಿನಗಳಲ್ಲಿ ಮಳೆಯ ಕೊರತೆಯಿಂದ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇರುವ ಸಂದರ್ಭದಲ್ಲಿ, ಈ ರೀತಿ ಕುಡಿಯುವ ನೀರು ನಿರಂತರವಾಗಿ ಪೋಲಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಆಟೋ ಚಾಲಕ ಶ್ರೀನಿವಾಸ ನಾಯ್ಕ ಹನುಮಾನನಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಿನ ಮೌಲ್ಯ ಮತ್ತು ಸಂರಕ್ಷಣೆಯ ಕುರಿತು ಜನರಿಗೆ ಜಾಗೃತಿ ಮೂಡಿಸುವುದಷ್ಟೇ ಸಾಲದು, ಸಾರ್ವಜನಿಕ ವ್ಯವಸ್ಥೆಯಲ್ಲಿನ ನೀರು ಸೋರಿಕೆಯನ್ನು ತಡೆಯುವ ಜವಾಬ್ದಾರಿಯೂ ಪುರಸಭೆಯ ಮೇಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಪರ್ಯಾಸವೆಂದರೆ, ನೀರಿನ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ‘ನೀರು ಉಳಿಸಿ, ಜೀವ ಉಳಿಸಿ’ ಎಂಬ ಘೋಷಣೆಯೊಂದಿಗೆ ಅಭಿಯಾನ ನಡೆಸುವ ಅಧಿಕಾರಿಗಳ ಆಡಳಿತ ವ್ಯಾಪ್ತಿಯಲ್ಲೇ ನೀರು ರಸ್ತೆಯಲ್ಲಿ ಹರಿದು ಪೋಲಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪುರಸಭೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ನೀರು ಪೋಲಾಗುತ್ತಿರುವುದನ್ನು ತಡೆದು, ಸಂಬಂಧಪಟ್ಟ ಪೈಪ್‌ಲೈನ್ ದುರಸ್ತಿಗೊಳಿಸಬೇಕು ಎಂದು ನಿವೃತ್ತ ಸೈನಿಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಆಸರಕೇರಿ ಆಗ್ರಹಿಸಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಸರಾಬಿ ನದಿ ಉಳಿಸಲು ಇನ್ನೆಷ್ಟು ಕಾಯಬೇಕು? ನಗರಸಭೆಗೆ ಹೊಣೆಗಾರಿಕೆಯ ಸವಾಲು

Impact/ ‘ಭಟ್ಕಳ ಡೈರಿ’ ವರದಿ ಫಲಶ್ರುತಿ: ತ್ಯಾಜ್ಯ ತೆರವುಗೊಳಿಸಿದ ಭಟ್ಕಳ ನಗರಸಭೆ