ಭಟ್ಕಳ ಡೈರಿ ವರದಿ
ಭಟ್ಕಳ: ಕರ್ನಾಟಕದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರವಾಗಿ ಕುಂಠಿತಗೊಂಡಿದೆ. ಮುಂಗಾರು ಅಂತ್ಯದ ಹಂತ ತಲುಪಿದರೂ ನಿರೀಕ್ಷಿತ ಮಳೆಯಾಗದಿರುವುದು ಕುಡಿಯುವ ನೀರಿನ ಪೂರೈಕೆ, ಭತ್ತದ ಕೃಷಿ ಮತ್ತು ಜಾನುವಾರುಗಳ ಮೇವಿನ ಲಭ್ಯತೆ ಕುರಿತು ಆತಂಕ ಮೂಡಿಸಿದೆ.
ಭಟ್ಕಳಕ್ಕೆ ನೀರು ಪೂರೈಸುವ ಪ್ರಮುಖ ಜಲಮೂಲವಾದ ಕಡವಿನಕಟ್ಟೆ ಅಣೆಕಟ್ಟಿಗೆ ನೀರಿನ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನೀರಿನ ಲಭ್ಯತೆ ಕುರಿತು ಕಳವಳ ವ್ಯಕ್ತವಾಗಿದೆ.
ವಾಡಿಕೆ ಮಳೆಯ ಅರ್ಧದಷ್ಟೂ ಆಗುವ ಸಾಧ್ಯತೆ ಕಡಿಮೆ: ಭಟ್ಕಳದಲ್ಲಿ ವಾರ್ಷಿಕ ವಾಡಿಕೆ ಮಳೆ ಸುಮಾರು ೩,೪೬೬ ಮಿಲಿಮೀಟರ್ನಿಂದ ೪,೧೫೨ ಮಿಲಿಮೀಟರ್ವರೆಗೆ ಇರುತ್ತದೆ. ವರ್ಷದಲ್ಲಿ ಸರಾಸರಿ ೧೬೫ಕ್ಕೂ ಹೆಚ್ಚು ದಿನಗಳು ಮಳೆ ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇದು ೫,೦೦೦ರಿಂದ ೫,೫೦೦ ಮಿಲಿಮೀಟರ್ವರೆಗೂ ದಾಖಲಾಗುತ್ತಿತ್ತು. ಆದರೆ ಈ ವರ್ಷ ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ವಾರ್ಷಿಕ ಮಳೆ ಪ್ರಮಾಣ ಕಳೆದ ವರ್ಷಗಳಿಗಿಂತ ಬಹಳ ಕಡಿಮೆಯಾಗುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ವರದಿ ಪ್ರಕಾರ, ಭಟ್ಕಳ ಒಳಗೊಂಡಿರುವ ಕರಾವಳಿ ಕರ್ನಾಟಕ ಉಪವಿಭಾಗದಲ್ಲಿ ಒಟ್ಟಾರೆಯಾಗಿ ಶೇ. ೨೮ಕ್ಕಿಂತಲೂ ಹೆಚ್ಚು ಮಳೆ ಕೊರತೆ ದಾಖಲಾಗಿದೆ. ಮುಂಗಾರು ಮುಕ್ತಾಯದ ಹಂತದಲ್ಲಿರುವುದರಿಂದ ವಾರ್ಷಿಕ ಗುರಿ ತಲುಪುವುದು ಕಷ್ಟಕರವಾಗಿದೆ.
ತೋಟಗಳಿಗೆ ನೀರಾವರಿ ಒತ್ತಡ: ಮಳೆ ಕೊರತೆಯಿಂದಾಗಿ ಹಳ್ಳ-ತೊರೆಗಳ ನೀರನ್ನೇ ಅವಲಂಬಿಸಿರುವ ತೋಟಗಳ ಮಾಲೀಕರಿಗೆ ನೀರಾವರಿ ಸಮಸ್ಯೆ ಎದುರಾಗಿದೆ. ಕೆಲವು ಕಡೆ ತೋಟಗಳಿಗೆ ನೀರು ಹಾಯಿಸಲು ಪಂಪ್ಗಳನ್ನು ಬಳಸಲಾಗುತ್ತಿದೆ. ಹಳ್ಳಗಳ ನೀರಿನ ಬಳಕೆ ಹೆಚ್ಚಾದರೆ ಕಡವಿನಕಟ್ಟೆ ಅಣೆಕಟ್ಟು ಮತ್ತು ಭಟ್ಕಳ ಪಟ್ಟಣದ ನೀರಿನ ಲಭ್ಯತೆಯ ಮೇಲೂ ಒತ್ತಡ ಹೆಚ್ಚುವ ಆತಂಕವಿದೆ.
೨,೦೦೦ರಿಂದ ೨,೫೦೦ ಹೆಕ್ಟೇರ್ ಭತ್ತದ ಬೆಳೆ ಅಪಾಯದಲ್ಲಿ: ಭಟ್ಕಳ ತಾಲೂಕಿನಲ್ಲಿ ಅಂದಾಜು ೨,೦೦೦ರಿಂದ ೨,೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಕೈಗೊಳ್ಳಲಾಗಿದೆ. ಇದರಲ್ಲಿ ತಾಲೂಕಿನ ಮುಟ್ಟಳ್ಳಿ, ಶಿರಾಲಿ, ಬೆಳ್ಕೆ, ಮುಂಡಳ್ಳಿ ಮುಂತಾದ ಗ್ರಾಮೀಣ ಭಾಗಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದರಲ್ಲಿ ಹೆಚ್ಚಿನ ಭಾಗ ಮಳೆಯನ್ನೇ ಅವಲಂಬಿಸಿದೆ. ಮಳೆ ಕೈಕೊಟ್ಟಿರುವುದರಿಂದ ಗದ್ದೆಗಳಲ್ಲಿ ತೇವಾಂಶ ಕಡಿಮೆಯಾಗುತ್ತಿದೆ. ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎತ್ತರದ ಪ್ರದೇಶಗಳಲ್ಲಿರುವ ಮಳೆ ಆಶ್ರಿತ ಗದ್ದೆಗಳಲ್ಲಿ ಎಳೆಯ ಭತ್ತದ ಸಸಿಗಳು ಒಣಗಿ ಹೋಗುವ ಅಪಾಯ ಎದುರಾಗಿದೆ. ಸಕಾಲದಲ್ಲಿ ಮಳೆಯಾಗದಿದ್ದರೆ ರೈತರು ಬೆಳೆ ನಷ್ಟ ಅನುಭವಿಸುವ ಸಾಧ್ಯತೆಯಿದ್ದು, ಕೃಷಿ ಚಟುವಟಿಕೆಗಳ ಮೇಲೆ ಮಳೆ ಕೊರತೆಯ ಪರಿಣಾಮ ಬೀರುವ ಆತಂಕವಿದೆ.
ಜಾನುವಾರುಗಳ ಮೇವಿಗೂ ಕೊರತೆ ಭೀತಿ: ಮಳೆ ಕಡಿಮೆಯಾಗಿರುವುದರಿಂದ ಹುಲ್ಲು ಮತ್ತು ಇತರ ಹಸಿರು ಸಸ್ಯಗಳ ಬೆಳವಣಿಗೆಯೂ ಕುಂಠಿತವಾಗಿದೆ. ಇದರಿಂದ ಮುಂಬರುವ ತಿಂಗಳುಗಳಲ್ಲಿ ಜಾನುವಾರುಗಳಿಗೆ ಮೇವು ಒದಗಿಸುವುದು ರೈತರಿಗೆ ಸವಾಲಾಗುವ ಸಾಧ್ಯತೆಯಿದೆ. ಮೇಯಲು ಹಸಿರು ಪ್ರದೇಶಗಳು ಒಣಗುತ್ತಿರುವುದರಿಂದ ಜಾನುವಾರುಗಳಿಗೆ ಹಸಿರು ಮೇವು ಹುಡುಕಿಕೊಂಡು ಪಶ್ಚಿಮ ಘಟ್ಟಗಳತ್ತ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.
ಒಟ್ಟಿನಲ್ಲಿ, ಭಟ್ಕಳದಲ್ಲಿ ಈ ಬಾರಿ ಉಂಟಾಗಿರುವ ಮಳೆ ಕೊರತೆ ಕುಡಿಯುವ ನೀರು, ಕೃಷಿ ಮತ್ತು ಪಶುಸಂಗೋಪನೆ ಸೇರಿದಂತೆ ಗ್ರಾಮೀಣ ಬದುಕಿನ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಬೀಳುವ ಹಿಂಗಾರು ಮಳೆಯ ಪ್ರಮಾಣವು ಪರಿಸ್ಥಿತಿಯ ಮೇಲೆ ನಿರ್ಣಾಯಕ ಪರಿಣಾಮ ಬೀರಲಿದೆ.
ಇದನ್ನೂ ಓದಿ :
ನವರಾತ್ರಿ ಹಬ್ಬಕ್ಕೆ ಬೆಂಗಳೂರು–ಕಾರವಾರ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ
ಭಟ್ಕಳದ ಎಐಟಿಎಂ ವಿದ್ಯಾರ್ಥಿ ಪ್ರವೀಣ ರವಿ ಹರಿಜನಗೆ ದಸರಾ ಸಿಎಂ ಕಪ್ ಕರಾಟೆಯಲ್ಲಿ ಕಂಚಿನ ಪದಕ




