ಭಟ್ಕಳ ಡೈರಿ ವರದಿ

ಕಾರವಾರ: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆ ಯಶವಂತಪುರ–ಮಡಗಾಂವ್ ನಡುವೆ ವಿಶೇಷ ರೈಲಿನ ಒಂದು ಸುತ್ತಿನ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಈ ರೈಲು ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ ಮತ್ತು ಕಾರವಾರ ಸೇರಿದಂತೆ ಕರಾವಳಿಯ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

ರೈಲು ಸಂಚಾರದ ವೇಳಾಪಟ್ಟಿ: ೦೬೫೯೧ ಸಂಖ್ಯೆಯ ಯಶವಂತಪುರ–ಮಡಗಾಂವ್ ಎಕ್ಸ್‌ಪ್ರೆಸ್ ವಿಶೇಷ ರೈಲು ಶುಕ್ರವಾರ ರಾತ್ರಿ ೧೧.೫೫ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಸಂಜೆ ೬.೧೦ಕ್ಕೆ ಮಡಗಾಂವ್ ತಲುಪಲಿದೆ. ಹಿಂತಿರುಗುವ ದಿಕ್ಕಿನಲ್ಲಿ ೦೬೫೯೨ ಸಂಖ್ಯೆಯ ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಭಾನುವಾರ ಬೆಳಿಗ್ಗೆ ೮.೪೦ಕ್ಕೆ ಮಡಗಾಂವ್‌ನಿಂದ ಹೊರಟು, ಅದೇ ದಿನ ರಾತ್ರಿ ೧೧.೫೫ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

ಕರಾವಳಿಯ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ: ಈ ವಿಶೇಷ ರೈಲು ಎರಡೂ ದಿಕ್ಕಿನಲ್ಲಿ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ ಹಾಗೂ ಕಾಣಕೋಣ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

ರೈಲಿನ ಬೋಗಿಗಳ ವಿವರ: ವಿಶೇಷ ರೈಲಿನಲ್ಲಿ ಒಂದು ಎಸಿ ಟು ಟೈರ್, ಮೂರು ಎಸಿ ತ್ರೀ ಟೈರ್, ಐದು ಸ್ಲೀಪರ್ ಮತ್ತು ಏಳು ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಸೇರಿದಂತೆ ಒಟ್ಟು ೧೮ ಬೋಗಿಗಳಿರಲಿವೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರು ಮತ್ತು ಕರಾವಳಿ ಭಾಗಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಈ ವಿಶೇಷ ರೈಲು ಅನುಕೂಲವಾಗಲಿದೆ.

ಇದನ್ನೂ ಓದಿ:

ಭಟ್ಕಳದ ಎಐಟಿಎಂ ವಿದ್ಯಾರ್ಥಿ ಪ್ರವೀಣ ರವಿ ಹರಿಜನಗೆ ದಸರಾ ಸಿಎಂ ಕಪ್ ಕರಾಟೆಯಲ್ಲಿ ಕಂಚಿನ ಪದಕ

ಭಟ್ಕಳದಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ: ಮೂವರಿಗೆ ಗಾಯ, ಒಬ್ಬ ಗಂಭೀರ