ಭಟ್ಕಳ ಡೈರಿ ವರದಿ
ಭಟ್ಕಳ: ಮೀನುಗಾರಿಕೆ ವೃತ್ತಿಯ ಜೊತೆಗೆ ಜೀವ ರಕ್ಷಕ ಮುಳುಗು ತಜ್ಞರಾಗಿ, ರಕ್ತದಾನ ಚಳವಳಿ ಹಾಗೂ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಭಟ್ಕಳ ತಾಲೂಕಿನ ಮಾವಿನಕುರ್ವೆಯ ಸುರೇಶ ಬಸವ ಖಾರ್ವಿ ಅವರಿಗೆ ಎರಡು ಪ್ರತಿಷ್ಠಿತ ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ.
ಮುಂಡಗೋಡಿನಲ್ಲಿ ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ‘ಕನ್ನಡ ಸೇವಾ ಕಲ್ಪತರು ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಶ್ರೀ ಆರ್ಯದುರ್ಗಾದೇವಿ ಪ್ರಕಾಶನ ಹಾಗೂ ಮಾಸ್ತಿನಾ ಸ್ಟುಡಿಯೋ, ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯೋತ್ಸವದ ಅಂಗವಾಗಿ ಧವಳ ಕಲ್ಯಾಣ ಮಂಟಪದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಮಾಜಮುಖಿ ಸೇವೆಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಹಾಗೂ ವಿಮರ್ಶಕಿ ಡಾ. ನಾಗರತ್ನ ಎಸ್. ಶೆಟ್ಟಿ ಮತ್ತು ಪ್ರಕಾಶಕ ನರೇಶ ಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಇದಲ್ಲದೆ, ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ೭೧ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿಯೂ ಸುರೇಶ ಖಾರ್ವಿ ಅವರಿಗೆ ‘ಕರುನಾಡು ಕನ್ನಡ ಕಣ್ಮಣಿ ರಾಜ್ಯ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಚೆನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಂಗಳೂರಿನ ಅನಂತ ಪ್ರಕಾಶ ಕಿನ್ನಿಗೋಳಿ ಪ್ರಧಾನ ಸಂಪಾದಕ ಕೊಡತ್ತೂರು ಸಚ್ಚಿದಾನಂದ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ವಾಸುದೇವ ಎಲ್. ರಾಯ್ಕರ್ ಅಧ್ಯಕ್ಷತೆ ವಹಿಸಿದ್ದರು.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಶಿಕ್ಷಣ ಕ್ಷೇತ್ರಕ್ಕೆ ಭಟ್ಕಳದ ಕೊಂಕಣ ಖಾರ್ವಿ ಸಮಾಜದ ಬೆಂಬಲದ ಹಸ್ತ, ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಹೂಡಿಕೆ




Trackbacks/Pingbacks