ಭಟ್ಕಳ ಡೈರಿ ವರದಿ

ಭಟ್ಕಳ: ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ ಸಮಾಜದ ಸಹಕಾರ ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಭಟ್ಕಳ ಕೊಂಕಣ ಖಾರ್ವಿ ಸಮಾಜವು ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆ ₹೧೦ ಲಕ್ಷ ದೇಣಿಗೆ ನೀಡಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿದೆ.

ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ರಾಜೇಶ ನಾಯಕ ಅವರು ಕೊಂಕಣ ಖಾರ್ವಿ ಸಮಾಜ ನೀಡಿದ ₹೧೦,೦೦,೦೦೦ ಮೊತ್ತದ ಚೆಕ್ ಸ್ವೀಕರಿಸಿ ಮಾತನಾಡಿದರು. ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ, ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ ಹಳೆಯ ವಿದ್ಯಾರ್ಥಿಗಳು, ಹಿತೈಷಿಗಳು ಹಾಗೂ ಸಮಾಜದ ದಾನಿಗಳ ಸಹಕಾರ ಅತ್ಯಗತ್ಯ ಎಂದು ಅವರು ಹೇಳಿದರು.

ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿದ ಸಂದರ್ಭದಲ್ಲಿ ಭಟ್ಕಳದ ಎಲ್ಲ ಸಮಾಜಗಳ ಹಳೆಯ ವಿದ್ಯಾರ್ಥಿಗಳಲ್ಲಿ ಸಹಕಾರ ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಕೊಂಕಣ ಖಾರ್ವಿ ಸಮಾಜವು ದೇಣಿಗೆ ನೀಡುವ ಮೂಲಕ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಿರುವುದು ಶ್ಲಾಘನೀಯ ಎಂದು ರಾಜೇಶ ನಾಯಕ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಭಟ್ಕಳ ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷ ಸುಬ್ರಾಯ ಭಿಕ್ಕು ಖಾರ್ವಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಉಪಾಧ್ಯಕ್ಷ ಕೇಶವ ಖಾರ್ವಿ, ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಖಾರ್ವಿ, ಸದಸ್ಯರಾದ ಎನ್.ಡಿ. ಖಾರ್ವಿ, ಶ್ರೀನಿವಾಸ ಖಾರ್ವಿ, ರಾಮದಾಸ ಖಾರ್ವಿ, ಜನಾರ್ಧನ ಖಾರ್ವಿ, ರಾಮಕೃಷ್ಣ ಖಾರ್ವಿ, ತಿಮ್ಮಪ್ಪ ಖಾರ್ವಿ, ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಮ್ಯಾನೇಜರ್ ನಾಗೇಶ ಭಟ್ಟ, ಟ್ರಸ್ಟಿಗಳಾದ ಶ್ರೀಧರ ಶ್ಯಾನಭಾಗ, ರಮೇಶ ಖಾರ್ವಿ, ಅನಿಲ ನಾಯಕ, ಗುರುದತ್ ಶೇಟ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶ್ಯಾನಭಾಗ ಉಪಸ್ಥಿತರಿದ್ದರು.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಚಿನ್ನಾಭರಣ ನಾಪತ್ತೆಯಿಂದ ಮನನೊಂದು ನದಿಗೆ ಹಾರಿದ ವ್ಯಕ್ತಿ ಸಾವು; ಶಿರಾಲಿ ಬಳಿ ಮೃತದೇಹ ಪತ್ತೆ

ವೆಂಕಟಾಪುರದಲ್ಲಿ ಶೋಕ: ರಸ್ತೆ ಅಪಘಾತದಲ್ಲಿ ಮೀನುಗಾರ ಸಾವು