ಭಟ್ಕಳ ಡೈರಿ ವರದಿ
ಭಟ್ಕಳ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ವಾಹನಗಳಿಗೆ ವಿಧಿಸಲಾಗುತ್ತಿರುವ ಅತಿಯಾದ ಪ್ರವೇಶ ಹಾಗೂ ಪಾರ್ಕಿಂಗ್ ಶುಲ್ಕದ ವಿರುದ್ಧ ವಿವಿಧ ಟ್ಯಾಕ್ಸಿ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಭಟ್ಕಳ ಟ್ಯಾಕ್ಸಿ ಚಾಲಕ-ಮಾಲಕರ ಸಂಘ ಬೆಂಬಲ ಸೂಚಿಸಿದೆ. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಚಾಲಕರ ನ್ಯಾಯಯುತ ಬೇಡಿಕೆಗಳಿಗೆ ಧ್ವನಿ ನೀಡಿದ್ದಾರೆ.
ಟ್ಯಾಕ್ಸಿ ಚಾಲಕರು ವಾಹನ ಖರೀದಿಗಾಗಿ ಪಡೆದ ಸಾಲ, ತೆರಿಗೆ, ಟೋಲ್ ಸೇರಿದಂತೆ ಹಲವು ಆರ್ಥಿಕ ಹೊರೆಗಳನ್ನು ಹೊತ್ತು ದುಡಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಹಾಗೂ ಕರೆತರಲು ವಿಧಿಸಲಾಗುತ್ತಿರುವ ಅಧಿಕ ಪ್ರವೇಶ ಮತ್ತು ಪಾರ್ಕಿಂಗ್ ಶುಲ್ಕ ಚಾಲಕರಿಗೆ ಮತ್ತಷ್ಟು ಹೊರೆಯಾಗುತ್ತಿದೆ ಎಂದು ಭಟ್ಕಳ ಸಂಘದ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.
ವಿಮಾನ ನಿಲ್ದಾಣವು ಕೇವಲ ಖಾಸಗಿ ಸಂಸ್ಥೆಯ ಆದಾಯದ ಮೂಲವಾಗಿರದೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಸೇವೆ ಸಲ್ಲಿಸುವ ಟ್ಯಾಕ್ಸಿ ಚಾಲಕರ ಹಿತಾಸಕ್ತಿಯನ್ನೂ ಆಡಳಿತ ಮಂಡಳಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕರ ಸಮಸ್ಯೆಯನ್ನು ಇಂದು ಪ್ರಶ್ನಿಸದಿದ್ದರೆ, ನಾಳೆ ಕರ್ನಾಟಕದ ಇತರ ವಿಮಾನ ನಿಲ್ದಾಣಗಳಲ್ಲಿಯೂ ಇದೇ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಇದು ಕೇವಲ ಮಂಗಳೂರಿನ ಚಾಲಕರ ಹೋರಾಟವಲ್ಲ; ಕರ್ನಾಟಕದ ಸಮಸ್ತ ಟ್ಯಾಕ್ಸಿ ಚಾಲಕ-ಮಾಲಕರ ಸ್ವಾಭಿಮಾನ ಮತ್ತು ನ್ಯಾಯಯುತ ಹಕ್ಕುಗಳ ಹೋರಾಟವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು:
– ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಹಾಗೂ ಕರೆತರಲು ಬರುವ ಟ್ಯಾಕ್ಸಿಗಳಿಗೆ ಕನಿಷ್ಠ ೧೦ ನಿಮಿಷ ಉಚಿತ ಪ್ರವೇಶ ಕಲ್ಪಿಸಬೇಕು.
– ೧೦ ನಿಮಿಷದ ನಂತರ ವಿಧಿಸುವ ಶುಲ್ಕವನ್ನು ಗರಿಷ್ಠ ₹೧೦೦ಕ್ಕೆ ಸೀಮಿತಗೊಳಿಸಬೇಕು.
– ಪ್ರಯಾಣಿಕರನ್ನು ಇಳಿಸಿ ಹೊರಬರುವ ವಾಹನಗಳಿಗೆ ಅನಗತ್ಯ ಶುಲ್ಕ ವಿಧಿಸುವುದನ್ನು ನಿಲ್ಲಿಸಬೇಕು.
– ಟ್ಯಾಕ್ಸಿ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ವಿಮಾನ ನಿಲ್ದಾಣ ಆಡಳಿತ ಮಂಡಳಿ ಅಧಿಕೃತ ಸಭೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಬೇಕು.
ಜಿಲ್ಲೆ, ತಾಲೂಕು, ಭಾಷೆ ಹಾಗೂ ಸಂಘಟನೆಗಳು ಬೇರೆಬೇರೆಯಾಗಿದ್ದರೂ ಟ್ಯಾಕ್ಸಿ ವೃತ್ತಿಯ ಸಮಸ್ಯೆಗಳು ಎಲ್ಲೆಡೆ ಒಂದೇ ರೀತಿಯದ್ದಾಗಿದೆ. ಆದ್ದರಿಂದ ಚಾಲಕ-ಮಾಲಕರು ಒಗ್ಗಟ್ಟಿನಿಂದ ಹೋರಾಡಬೇಕಿದೆ. ಕರ್ನಾಟಕದ ಯಾವುದೇ ಭಾಗದ ಟ್ಯಾಕ್ಸಿ ಚಾಲಕರಿಗೆ ಅನ್ಯಾಯವಾದರೂ ಅವರ ಪರವಾಗಿ ಧ್ವನಿ ಎತ್ತಲು ಭಟ್ಕಳ ಸಂಘ ಸದಾ ಸಿದ್ಧವಿದೆ ಎಂದು ಸಂಘದ ಪ್ರತಿನಿಧಿಗಳು ತಿಳಿಸಿದರು.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
Taxi Drivers and Owners/ ಭಟ್ಕಳ ಟ್ಯಾಕ್ಸಿ ಚಾಲಕ–ಮಾಲಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
taxi drivers/ ಭಟ್ಕಳ ಟ್ಯಾಕ್ಸಿ ಚಾಲಕರ ಸಮಸ್ಯೆ ಪರಿಹಾರಕ್ಕಾಗಿ ಡಿ ವೈ ಎಸ್ ಪಿ ಕಚೇರಿಯಲ್ಲಿ ಸಭೆ




