ಭಟ್ಕಳ ಡೈರಿ ವರದಿ

ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ಬೆಳಕೆ ಸಮೀಪದ ಹಡೀನ ಅರಬ್ಬಿ ಸಮುದ್ರ ತೀರದಲ್ಲಿ ನಡೆದಿದೆ. ನಾಪತ್ತೆಯಾಗಿದ್ದ ಅವರ ಮೃತದೇಹ ಗುರುವಾರ ಬೆಳಗ್ಗೆ ಕಡಲತೀರದಲ್ಲಿ ಪತ್ತೆಯಾಗಿದೆ.

ಮೃತರನ್ನು ಹಡೀನದ ಸಣ್ಣಯ್ಯನಹಿತ್ಲು ನಿವಾಸಿ ಸುರೇಶ ನಾಯ್ಕ (೩೫) ಎಂದು ಗುರುತಿಸಲಾಗಿದೆ. ಅ. ೨೧ರಂದು ಸಂಜೆ ಸುಮಾರು ೫ರಿಂದ ೬.೪೫ರ ನಡುವೆ ಸುರೇಶ ನಾಯ್ಕ ಅವರು ಕೈಬಲೆ ಬಳಸಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಅಪ್ಪಳಿಸಿದ ಬೃಹತ್ ಅಲೆಯ ರಭಸಕ್ಕೆ ಸಿಲುಕಿದ ಅವರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಹಾಗೂ ಸ್ಥಳೀಯರು ಅವರಿಗಾಗಿ ಹುಡುಕಾಟ ನಡೆಸಿದ್ದರು.

ಗುರುವಾರ ಬೆಳಗ್ಗೆ ಸುಮಾರು ೬ ಗಂಟೆಗೆ ಹಡೀನ ಕಡಲತೀರದಲ್ಲಿ ಸುರೇಶ ನಾಯ್ಕ ಅವರ ಮೃತದೇಹ ಪತ್ತೆಯಾಗಿದೆ. ಘಟನೆ ಕುರಿತು ಮೃತರ ಸಹೋದರ ವಾಸುದೇವ ನಾಯ್ಕ (೫೦) ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ಕುರಿತು ಪಿಎಸ್ಐ ಮಲ್ಲಿಕಾರ್ಜುನಯ್ಯ ಕೊರಾಣಿ ಅವರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : 

ಮೂಡಭಟ್ಕಳ ಬೈಪಾಸ್‌ನಲ್ಲಿ ಕಾರು–ಬೈಕ್ ಅಪಘಾತ; ಬೈಕ್ ಸವಾರಗೆ ಗಂಭೀರ ಗಾಯ

ಸರ್ಪನಕಟ್ಟಾ ಕೋಣಾರ ಕ್ರಾಸ್‌ನಲ್ಲಿ ಕಾರು-ಬೈಕ್‌ಗೆ ಡಿಕ್ಕಿ; ಇಬ್ಬರು ಮಕ್ಕಳು, ದಂಪತಿಗೆ ಗಾಯ