ಭಟ್ಕಳ: ತಿರುಮಲ ವೆಂಕಟ್ರಮಣ ದೇವರ ಪುನ‌ರ್ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಪಲ್ಲಕ್ಕಿ ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕುಲಗುರು ಬ್ರಹ್ಮಾನಂದ ಸರಸ್ವತಿ ಶ್ರೀಗಳು ಉದ್ಘಾಟಿಸಿದರು.

ಪಾಲಕಿ ಮಹೋತ್ಸವ ವಿಡಿಯೋ ನೋಡಿ:  https://www.facebook.com/share/v/xxrQ666J3X3Prjmg/?mibextid=oFDknk

ನಂತರ ಆಶೀರ್ವಚನ ನೀಡಿದ ಅವರು, ಸುಖ, ಭೋಗದತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಮೋಕ್ಷಕ್ಕೆ ಹೋಗಲು ಸಾಧ್ಯವಿಲ್ಲ. ಎಲ್ಲರಿಗೂ ಎಲ್ಲ ಕಾಲದಲ್ಲಿಯೂ ಒಪ್ಪಿತವಾದ ಕಾರ್ಯ ಮಾಡಿದಾಗ ಮಾತ್ರ ಒಳಿತಾಗಲು ಸಾಧ್ಯ. ಮೊಕ್ಷದತ್ತ ಹೋಗಲು ಧಾರ್ಮಿಕ ಕಾರ್ಯಗಳೇ ಮುಖ್ಯವಾದ ದಾರಿಯಾಗಿದೆ. ನಾರಾಯಣ ಗುರುಗಳು ವೇದ, ಉಪನಿಷತ್ತುಗಳು ಹೇಳಿರುವುದನ್ನು ಮತ್ತೆ ನೆನಪಿಸಿದರು. ಅವರ ಮಾರ್ಗದಲ್ಲಿಯೇ ನಾವು ನಡೆಯಬೇಕಾಗಿದೆ ಎಂದರು.


ಅಯೋಧ್ಯೆಯಲ್ಲಿ ಅತಿಥಿಗೃಹ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದು, ಈ ಕುರಿತು ಮುಂದಿನ ವಾರ ಅಯೋಧ್ಯೆಗೆ ಹೋಗುವ ನಿರ್ಧಾರ ಮಾಡಿದ್ದೇವೆ. ಅಲ್ಲಿ ಅತಿಥಿ ಗೃಹ ನಿರ್ಮಾಣಕ್ಕೆ ಅಗತ್ಯದ ಜಾಗ ನೋಡಲು ಇಚ್ಛಿಸಿದ್ದೇವೆ. ಅಯೋಧ್ಯೆಯಲ್ಲಿ ಶಾಖಾ ಮಠವನ್ನು ಮಾಡಿ ಭಕ್ತರಿಗೆ ಅನುಕೂಲ ಮಾಡಿಕೊಡಲು ಚಿಂತನೆ ನಡೆದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದಲ್ಲಿ
ವಿವಿಧ ಸಾಧನೆ ಮಾಡಿದ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸಮಾಜದ ವಿವಿಧ ಸಾಧಕರನ್ನು ಸನ್ಮಾನಿಸಿ, ಗೌರವಿಸಿದರು. ತಿರುಮಲ ವೆಂಕಟ್ರಮಣ ದೇವಸ್ಥಾನದ ಹಾಗೂ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು.


ಮಂಜು ನಾಯ್ಕ ಪ್ರಾರ್ಥಿಸಿದರು. ನಾರಾಯಣ ನಾಯ್ಕ ಹಾಗೂ ಗಂಗಾಧರ ನಾಯ್ಕ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಡಿ.ಎಲ್. ನಾಯ್ಕ ಸ್ವಾಗತಿಸಿದರು. ಸಮಾಜದ ಗೌರವಾಧ್ಯಕ್ಷ ಕೃಷ್ಣಾ ನಾಯ್ಕ ವಂದಿಸಿದರು.