– ಮಲ್ಲು ಬ್ಯಾಕೋಡು
ಬಾಗಲಕೋಟೆ: ಕೃಷ್ಣಾ ತೀರದಿಂದ ಮರ್ಮಗೋವೆಯ ಬಂದರು ಹಾಗೂ ಮುಂಬೈಗೆ ನೇರ ಸಂಪರ್ಕ ಕಲ್ಪಿಸುವ ಬಾಗಲಕೋಟೆ ಕುಡಚಿ ರೈಲ್ವೆ ಮಾರ್ಗದ ಪ್ರಸ್ತಾಪ ಮರುಜೀವ ಪಡೆದು ಬರೋಬ್ಬರಿ 120 ವರ್ಷ ಕಳೆದಿದೆ. ವಿಶೇಷವೆಂದರೆ 142 ಕಿ.ಮಿ.ದೂರದ ಈ ಮಾರ್ಗದಲ್ಲಿ ಇಲ್ಲಿಯವರೆಗೆ ಬರೀ 30 ಕಿ.ಮಿ.ಮಾತ್ರ ಪೂರ್ಣ ಗೊಂಡಿದೆ.
ಬಳ್ಳಾರಿ ಜಿಲ್ಲೆಯ ಸೊಂಡೂರು ಭಾಗದಿಂದ ಕಬ್ಬಿಣದ ಅದಿರನ್ನು ಮರ್ಮಗೋವೆಯ ಬಂದರಿಗೆ ಸಾಗಿಸಲು ಅನುಕುಲವಾಗಲಿದೆ ಎಂಬ ಕಾರಣಕ್ಕೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ1884 ರಲ್ಲಿ ಮೊದಲ ಬಾರಿಗೆ ಬಾಗಲಕೋಟೆ ಕುಡಚಿ ನಡುವೆ ರೈಲು ಮಾರ್ಗದ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ1912 ಹಾಗೂ 1920 ರಲ್ಲಿ ಎರಡು ಬಾರಿ ಮಾರ್ಗ ನಿರ್ಮಾಣಕ್ಕೆ ಸಮಿಕ್ಷೆ ಕೂಡ ನಡೆದಿತ್ತು. ಆಗ ಯೋಜನೆ ಕಾರ್ಯಗತಗೊಂಡಿರಲಿಲ್ಲ. 1990 ರಲ್ಲಿ ಮರು ಜೀವ ಪಡೆದುಕೊಂಡಿತ್ತು.
ದಿವಂಗತ ಸಿದ್ದು ನ್ಯಾಮಗೌಡ ಕೇಂದ್ರ ಸಚಿವರಾದಾಗ 1993 ರಲ್ಲಿ ಮೂರನೇ ಬಾರಿಗೆ ಸಮೀಕ್ಷೆ ನಡೆದರೂ ಆರ್ಥಿಕವಾಗಿ ಕಾರ್ಯಸಾಧುವಾಗಲಿಲ್ಲ. ಈ ಭಾಗದ ಜನರ ಹೊರಾಟದ ಫಲದಿಂದ 2007ರಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸಿ 2010ರಲ್ಲಿ 986.30 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು. ಈ ಹಣವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ತಲಾ 50ರಷ್ಟು ಭರಿಸುವುದು ಮತ್ತು ರಾಜ್ಯ ಸರ್ಕಾರವೇ ಉಚಿತವಾಗಿ ಭೂಮಿ ಸ್ವಾಧೀನ ಮಾಡಿಕೊಂಡ ಜಮೀನನ್ನು ಕೇಂದ್ರ ಸರ್ಕಾರಕ್ಕೆ ಕೊಡುವ ಷರತ್ತನ್ನು ಯೋಜನೆ ಒಳಗೊಂಡಿತ್ತು.
ಈ ಭಾಗದಲ್ಲಿನ ಸಕ್ಕರೆ ಕಾರ್ಖಾನೆಗಳು, ಸಿಮೆಂಟ್, ಸುಣ್ಣದ ಕಲ್ಲು, ಜವಳಿ ಉದ್ಯಮಕ್ಕೆ, ದ್ರಾಕ್ಷಿ, ಲಿಂಬೆ ಹಣ್ಣು, ಇಲಕಲ್ ಗ್ರಾನೈಟ್ ಹೀಗೆ ಹಲವಾರು ಧೈನಂದಿನ ಸಾಗಾಣಿಕೆಗೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮೂಲಕ ಈ ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಈಗಾಗಲೇ ಬಾಗಲಕೋಟೆಯಿಂದ ಕಜ್ಜಿಡೋಣಿವರೆಗೆ 30 ಕಿ.ಮೀ. ಜೂನ್ 2018 ರಲ್ಲಿಯೇ ಮುಗಿದಿದೆ. ಅಲ್ಲಿ ನಿರ್ಮಿಸಿದ ನಿಲ್ದಾಣಗಳು ಬಿದ್ದು ಹಾಳಾಗಿವೆ. ಈಗ ಮತ್ತೆ ಲೋಕಾಪೂರದವರೆಗೆ ಕಾಮಗಾರಿ ಪೂರ್ಣವಾಗಬೇಕು ಅಂದರೆ ಮಾರ್ಚ್ ತಿಂಗಳಿನಲ್ಲಿ ಪೂರ್ಣ ವಾಗಬಹುದು.
2023 ಡಿಸೆಂಬರ್ ತಿಂಗಳಲ್ಲಿ ರೈಲು ಪ್ರಯಾಣ ಮಾಡುತ್ತೆ ಅಂತ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್ ಹೇಳಿದ್ದರು. ಚುನಾವಣೆ ಬಂದಾಗ ಮಾತ್ರ ಈ ಭಾಗದ ಜನಪ್ರತಿನಿಧಿಗಳಿಗೆ ಈ ಕಾಮಗಾರಿ ನೆನಪು ಮಾಡಿಕೊಂಡು ಇದರ ಬಗ್ಗೆ ಭಾಷಣ ಮಾಡಿ ಹೋಗುತ್ತಾರೆ. ಏನೇ ಆಗಲಿ, 2024ರಲ್ಲಿಯಾದರೂ ಈ ಕಾಮಗಾರಿ ಪೂರ್ಣವಾಗಬೇಕು ಅನ್ನುವುದೇ ಈ ಭಾಗದ ಜನರ ಕೂಗು.
ನಾವು ಹೊರಾಟ ಮಾಡಿದ ಫಲದಿಂದ ಈ ಕಾಮಗಾರಿ ನಡೆಯುತ್ತಿದೆ. ರಾಜ್ಯ ಸರ್ಕಾರ ಭೂಮಿ ಸ್ವಾಧೀನ ಮಾಡಿಕೊಂಡು ನಮಗೆ ಕೊಡತಾಯಿಲ್ಲಾ ಅಂತ ಕೇಂದ್ರ ಸರ್ಕಾರ ಹೇಳುತ್ತಿತ್ತು. ಈಗ ರಾಜ್ಯ ಸರ್ಕಾರ ಭೂಮಿ ಸ್ವಾಧೀನ ಮಾಡಿಕೊಂಡು ಕೇಂದ್ರ ಸರ್ಕಾರಕ್ಕೆ ಕೊಟ್ಟರೂ ಪೂರ್ಣಪ್ರಮಾಣದ ಕಾಮಗಾರಿ, ಟೆಂಡರ್ ಪ್ರಕ್ರಿಯೆ ನಡೆಯುತ್ತಿಲ್ಲ. ಕಾಮಗಾರಿ ಚುರುಕುಗೊಳಿಸಲು ಒತ್ತಾಯಿಸಿ ಹಿಂದಿನ ಹೋರಾಟದ ಮಾದರಿಯಲ್ಲೇ ಅರೆಬೆತ್ತಲೆ ಮೆರವಣಿಗೆ ಮಾಡಿ ಸಂಸದರ ಕಚೇರಿ ಎದುರು ಧರಣಿ ಸತ್ಯಾಗ್ರಹ ಮಾಡುತ್ತೇವೆ.
– ಕುತುಬುದಿನ್ ಖಾಜಿ, ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ